ವಾಷಿಂಗ್ಟನ್: ಬೀಜಿಂಗ್‌ನ ಕಾನೂನುಬಾಹಿರ ಚಟುವಟಿಕೆಯನ್ನು ಖಂಡಿಸಿರುವ ಅಮೆರಿಕವು, ಮಿಲಿಟರಿ ತಾಲೀಮು ನಡೆಸಲು ತನ್ನ ವಿಮಾನವಾಹಕ ನೌಕೆಗಳನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಕಳುಹಿಸಿದೆ.
ಯುಎಸ್ಎಸ್ ರೊನಾಲ್ಡ್ ರೇಗನ್ (ಸಿವಿಎನ್ 76) ಮತ್ತು ಯುಎಸ್ಎಸ್ ನಿಮಿಟ್ಜ್ (ಸಿವಿಎನ್ 68) ಎಂಬ ಎರಡು ನೌಕೆಗಳನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಕಳುಹಿಸಿದ್ದು, ಅಲ್ಲಿ ಅಮೆರಿಕ ಸೈನಿಕರು ಸಮರಾಭ್ಯಾಸ ಮಾಡಲಿದ್ದಾರೆ.
ಇಂಡೋ-ಪೆಸಿಫಿಕ್ ಪ್ರದೇಶವನ್ನು ಬೆಂಬಲಿಸುವ ಸಲುವಾಗಿ ಅಂದರೆ ಭಾರತದ ಪರ ಅಮೆರಿಕ ಈ ಕಾರ್ಯಾಚರಣೆ ಕೈಗೊಂಡಿದೆ ಎಂದು ಯುಎಸ್ ನೌಕಾಪಡೆ ದೃಢಪಡಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಏಕಕಾಲದಲ್ಲಿ ಒಂದೇ ಪ್ರದೇಶ (ದಕ್ಷಿಣ ಚೀನಾ ಸಮುದ್ರ)ದಲ್ಲಿ ಅಮೆರಿಕದ ಮತ್ತು ಚೀನಾ ಪಡೆಗಳು ತಾಲೀಮು ನಡೆಸಲಿವೆ. ಈ ಮೂಲಕ ಚೀನಾಗೆ ಸೆಡ್ಡು ಹೊಡೆಯಲು ಅಮೆರಿಕ ಮುಂದಾಗಿದೆ.
ಮಿಲಿಟರಿ ತಾಲೀಮು ದೀರ್ಘ-ಯೋಜಿತವಾಗಿದೆ. ಆದರೆ ಅಮೆರಿಕ ಸೇರಿದಂತೆ ಇತರ ದೇಶಗಳಿಂದ ವಿರೋಧಿಸ್ಪಟ್ಟಿರುವ ಮಿಲಿಟರಿ ಡ್ರಿಲ್‌ಗಳನ್ನು ಪ್ಯಾರಾಸೆಲ್ ದ್ವೀಪಗಳ ಬಳಿ 'ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ'ವು ನಡೆಸುತ್ತಿರುವುದರಿಂದ ಯುಎಸ್ ಈ ನಿರ್ಧಾರ ಕೈಗೊಂಡಿದೆ. ಬೀಜಿಂಗ್‌ನ ಈ ಕಾನೂನುಬಾಹಿರ ಚಟುವಟಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಟ್ವೀಟ್ ಮಾಡಿದ್ದಾರೆ.