ವೆಲ್ಲಿಂಗ್ಟನ್(ನ್ಯೂಜಿಲ್ಯಾಂಡ್) : ಆರು ತಿಂಗಳುಗಳಿಂದ ಶೂನ್ಯ ಕೋವಿಡ್ ಕೇಸ್ ದಾಖಲಾಗುತ್ತಿದ್ದ ನ್ಯೂಜಿಲ್ಯಾಂಡ್ನಲ್ಲಿ ಇದೀಗ ಒಂದು ಪ್ರಕರಣ ಪತ್ತೆಯಾಗಿದೆ. ತಕ್ಷಣವೇ ಮೂರು ದಿನಗಳ ಕಾಲ ಲಾಕ್‌ಡೌನ್ ಹೇರಿ ಸರ್ಕಾರ ಆದೇಶ ಹೊರಡಿಸಿದೆ.
ಪತ್ತೆಯಾಗಿರುವ ಕೇಸ್ ಡೆಲ್ಟಾ ರೂಪಾಂತರಿ ಎಂದು ಶಂಕಿಸಲಾಗಿದೆ. ಇದು 'ಗೇಮ್ ಚೇಂಜರ್' ಆಗಲು ನಾವು ಅವಕಾಶ ಮಾಡಿ ಕೊಡುವುದಿಲ್ಲ ಎಂದು ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ.
ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಥವಾ ಆರಂಭದಲ್ಲೇ ಸೋಂಕು ಹರಡುವುದನ್ನು ವಿಫಲವಾದರೆ ಏನಾಗಬಹುದು ಎಂಬುದನ್ನು ನಾವು ನೋಡಿದ್ದೇವೆ ಎಂದು ಮೂರನೇ ಕೊರೊನಾ ಅಲೆಗೆ ಸಾಕ್ಷಿಯಾಗಿರುವ ಆಸ್ಟ್ರೇಲಿಯಾವನ್ನು ಉದಾಹರಣೆ ನೀಡಿ ಅರ್ಡೆರ್ನ್ ಹೇಳಿಕೆ ನೀಡಿದ್ದಾರೆ. ಮಂಗಳವಾರ (ಇಂದು) ರಾತ್ರಿಯಿಂದ ನ್ಯೂಜಿಲ್ಯಾಂಡ್ನಲ್ಲಿ ಮೂರು ದಿನಗಳ ಕಾಲ ಲಾಕ್‌ಡೌನ್ ಹೇರಲಾಗಿದ್ದು, ವಿಸ್ತರಣೆ ಆಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಹೆಚ್ಚಾಯ್ತು ಕೋವಿಡ್ ಮೂರನೇ ಅಲೆ ಭೀತಿ: ಎರಡೇ ದಿನದಲ್ಲಿ 242 ಮಕ್ಕಳಲ್ಲಿ ಸೋಂಕು
ಐದು ಮಿಲಿಯುನ್ ಜನಸಂಖ್ಯೆ ಹೊಂದಿರುವ ನ್ಯೂಜಿಲ್ಯಾಂಡ್, ಸಾಂಕ್ರಾಮಿಕದ ಆರಂಭದಿಂದಲೇ ಕಠಿಣ ನಿರ್ಬಂಧಗಳನ್ನು ಹೇರಿ ಕೋವಿಡ್ ನಿಯಂತ್ರಣಕ್ಕೆ ತರುತ್ತಾ ಬಂದಿದೆ. ಈವರೆಗೆ ಜನಸಂಖ್ಯೆಯ ಕೇವಲ ಶೇ.20ರಷ್ಟು ಜನರು ಮಾತ್ರ ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದಾರೆ.
ಆದರೂ ಅಲ್ಲಿ ಈವರೆಗೆ ಪತ್ತೆಯಾಗಿದ್ದು 2,926 ಮಂದಿ ಸೋಂಕಿತರು ಹಾಗೂ ಮೃತಪಟ್ಟಿದ್ದು 27 ಮಂದಿ. ಕಳೆದ 6 ತಿಂಗಳಿನಿಂದ ಒಂದೇ ಒಂದು ಕೇಸ್ ಕೂಡ ವರದಿಯಾಗಿರಲಿಲ್ಲ.