ಡರ್ಬನ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರನ್ನು ಜೈಲಿಗಟ್ಟಿದ ಬೆನ್ನಲ್ಲೇ ಉಂಟಾಗಿದ್ದ ಹಿಂಸಾಚಾರದಲ್ಲಿ ಸುಮಾರು 220ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ. ಈ ನಡುವೆ ಅಲ್ಲಿರುವ ಭಾರತೀಯ ಮೂಲದ ನಿವಾಸಿಗಳು, ತಮ್ಮ ಕುಟುಂಬ ಹಾಗೂ ವ್ಯವಹಾರವನ್ನು ರಕ್ಷಿಸಿಕೊಳ್ಳಲು ರಕ್ಷಣಾ ಪಡೆಗಳ ಮೊರೆ ಹೋಗಿದ್ದಾರೆ.
ನಮ್ಮ ಕುಟುಂಬಗಳು ಹಾಗೂ ನೆರೆಹೊರೆಯವರನ್ನು ರಕ್ಷಿಸಿಕೊಳ್ಳುವ ಸಲುವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದೇವೆ. ಇದ್ರ ಜೊತೆಗೆ, ರಕ್ಷಣಾ ಗುಂಪುಗಳನ್ನು ಸಂಘಟಿಸಲು ಒತ್ತಾಯಿಸುತ್ತಿದ್ದೇವೆ ಅನಿವಾಸಿ ಭಾರತೀಯರೊಬ್ಬರು ಹೇಳಿದರು.
ಡರ್ಬನ್‌ನಲ್ಲಿದ್ದಾರೆ 10 ಲಕ್ಷ ಭಾರತೀಯರು
ನಾವು ವ್ಯವಹಾರ ಮತ್ತು ವೃತ್ತಿಯಲ್ಲಿ ಯಶಸ್ವಿಯಾಗಿದ್ದೇವೆ. ಅನೇಕ ಸ್ಥಳೀಯರು ನಮ್ಮ ಬಗ್ಗೆ ಅಸೂಯೆ ಪಟ್ಟಿದ್ದಾರೆ. ಅವರು ನಮ್ಮನ್ನು ಲೂಟಿ ಮಾಡಲು ಉದ್ದೇಶಿಸಿದ್ದರು ಎಂದು ಡರ್ಬನ್‌ನಲ್ಲಿರುವ ವೈದ್ಯ ಪ್ರೀತಮ್ ನಾಯ್ಡು (ಭದ್ರತಾ ಕಾರಣಗಳಿಗಾಗಿ ಹೆಸರು ಬದಲಾಯಿಸಲಾಗಿದೆ) ಹೇಳಿದ್ದಾರೆ. ಡರ್ಬನ್‌ನಲ್ಲಿ 10 ಲಕ್ಷ ಭಾರತೀಯ ನಿವಾಸಿಗಳು ನೆಲೆಸಿದ್ದಾರೆ.
'ಇದು ನಿಮ್ಮ ದೇಶವಲ್ಲ, ಇಲ್ಲಿಂದ ಹೊರಡಿ..'
ಸ್ಥಳೀಯ ಪೊಲೀಸರು ಕೇವಲ ಮೂಕ ಪ್ರೇಕ್ಷಕರಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಗಲಭೆಕೋರರು ಎಲ್ಲರನ್ನೂ ಲೂಟಿಮಾಡಿ, ಎಲ್ಲರನ್ನೂ ಸುಟ್ಟು ಹಾಕಿ ಎಂದು ಕೂಗುತ್ತಿದ್ದಾರೆ. ಅವರು ಭಾರತೀಯರನ್ನು ಹೊರಹೋಗುವಂತೆ ಒತ್ತಾಯಿಸುತ್ತಿದ್ದಾರೆ. ನಾವು ಹಲವಾರು ತಲೆಮಾರುಗಳಿಂದ ಇಲ್ಲೇ ನೆಲೆಸಿದ್ದೇವೆ. ಇದು ನಿಮ್ಮ ದೇಶವಲ್ಲ, ಇಲ್ಲಿಂದ ಹೋಗಿ ಎಂದು ಬೆದರಿಸುತ್ತಿದ್ದಾರೆ ಎಂದು ಗೌಟೆಂಗ್‌ನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿರುವ ರಾಜೇಶ್ ಪಟೇಲ್ ಹೇಳಿದ್ದಾರೆ. ಹಿಂಸಾಚಾರ ನಡೆಸುತ್ತಿರುವ ಪಟ್ಟಣಗಳ ಪೈಕಿ ಗೌಟೆಂಗ್ ಹಾಗೂ ಕ್ವಾಜು ನಟಾಲ್ ಕೂಡ ಸೇರಿವೆ.
ಇದನ್ನೂ ಓದಿ: ಕಣ್ಮರೆಯಾಗಿದ್ದ ರಷ್ಯಾದ ಪ್ರಯಾಣಿಕ ವಿಮಾನ ಪತ್ತೆ : ಎಲ್ಲರೂ ಸೇಫ್
ಡರ್ಬನ್‌ನಲ್ಲಿ ಭಾರತೀಯರಿಗೆ ಅಪಾರ ನಷ್ಟ
ಡರ್ಬನ್ ಒಂದರಲ್ಲೇ ಭಾರತೀಯ ಮೂಲದ ಜನರ ಒಡೆತನದ 50,000 ವ್ಯವಹಾರಗಳು ನಾಶವಾಗಿವೆ. ನಷ್ಟವು ಸುಮಾರು 16 ಬಿಲಿಯನ್ ರಾಂಡ್ಸ್ (1 ರ್ಯಾಂಡ್ ಗೆ 5.17 ರೂ.) ಎಂದು ಅಂದಾಜಿಸಲಾಗಿದೆ ಎಂದು ಡರ್ಬನ್ ಚೇಂಬರ್ ಆಫ್ ಕಾಮರ್ಸ್‌ನ ಜಾನೆಲೆ ಖೋಮೋ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಸರ್ಕಾರ ಗುರುವಾರ ರಾತ್ರಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ.