ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.
ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸಭೆ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ತಂದಿರುವ ಸರ್ಕಾರ ಇದನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲು ಮುಂದಾಗಲಿದೆ. ಈ ಸಂದರ್ಭ ಪಕ್ಷ ಒಂದಾಗಿ ಇದನ್ನು ಹೇಗೆ ವಿರೋಧಿಸಬೇಕು, ಮುಂದಿನ ಮೂರು ದಿನಗಳ ಕಾಲ ಕಾಂಗ್ರೆಸ್ ಹೋರಾಟ ಯಾವ ರೀತಿ ಇರಬೇಕು, ಅಗತ್ಯವಿದ್ದರೆ ಸದನದ ಒಳಗೆ ಹಾಗೂ ಹೊರಗೆ ಯಾವ ರೀತಿ ಪ್ರತಿರೋಧ ಒಡ್ಡಬಹುದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಮೊಮ್ಮಗ ಹಾಗೂ ಅಳಿಯ ನಡೆಸಿರುವ ಭ್ರಷ್ಟಾಚಾರದ ವಿಚಾರವನ್ನು ಪ್ರಸ್ತಾಪಿಸಿ ಸಿಎಂ ರಾಜೀನಾಮೆಗೆ ಒತ್ತಾಯಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಈ ಎಲ್ಲಾ ಹೋರಾಟಗಳು ಯಾವ ರೀತಿ ನಡೆಯಬೇಕು ಎಂಬ ಕುರಿತು ಶಾಸಕಾಂಗ ಸಭೆಯಲ್ಲಿ ಚರ್ಚಿಸಲಾಗಿದೆ.
ವಿಧಾನ ಮಂಡಲ ಅಧಿವೇಶನವನ್ನು 15 ದಿನ ನಡೆಸುವಂತೆ ಒತ್ತಾಯಿಸಿದರೂ ಸರ್ಕಾರ ಇದಕ್ಕೆ ಸಮ್ಮತಿ ನೀಡದೆ ಕೇವಲ ಆರು ದಿನಗಳಿಗೆ ಸೀಮಿತವಾಗಿಸಿದೆ. ಮಹತ್ವದ ವಿಚಾರಗಳ ಮೇಲಿನ ಚರ್ಚೆಗೆ ಅವಕಾಶ ಒದಗಿ ಬಂದಿಲ್ಲ. ಆರಂಭದ ಮೂರು ದಿನ ಕಳೆದಿದ್ದು, ಮುಂದಿನ ಮೂರು ದಿನಗಳಿಗೆ ಪಕ್ಷದ ಹೋರಾಟ ಹೇಗಿರಬೇಕು ಎಂಬ ಕುರಿತು ಸುದೀರ್ಘ ಚರ್ಚೆ ನಡೆದಿದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಶಾಸಕರಿಗೆ ಸದನದಲ್ಲಿ ಯಾವ ರೀತಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಕುರಿತು ಮಾರ್ಗದರ್ಶನ ನೀಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಧ್ವನಿಯೆತ್ತಲು, ಜನಪರ ಹೋರಾಟ ನಡೆಸಲು ಸದನದಲ್ಲಿ ಕೇವಲ ಮೂರು ದಿನ ಮಾತ್ರ ಕಾಲಾವಕಾಶ ಇದ್ದು, ಈ ಅವಧಿಯಲ್ಲಿ ಹೆಚ್ಚಿನ ಸಮಯವನ್ನು ಪಕ್ಷ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ.