ಒಂದು ಕಾಲದಲ್ಲಿ ಸ್ಟಾರ್ಗಳಾಗಿ ಬೆಳ್ಳಿ ತೆರೆ ಮೇಲೆ ಮಿಂಚಿದ ಅದೆಷ್ಟೋ ತಾರೆಯರು, ಬಹಳ ವರ್ಷಗಳ ಬಳಿಕ ಮತ್ತೆ ಇಂಡಸ್ಟ್ರಿಗೆ ಬರುವುದು ಹೊಸತೇನಲ್ಲ. ಇದೀಗ ಎಕ್ಸ್ಕ್ಯೂಸ್ ಮಿ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದ ನಟ ಸುನೀಲ್ ರಾವ್, 12 ವರ್ಷಗಳ ನಂತರ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. 'ತುರ್ತು ನಿರ್ಗಮನ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸುನೀಲ್ ರಾವ್ ಮರಳಿ ಬಂದಿದ್ದಾರೆ.
ಸುನೀಲ್ ರಾವ್ ಮುಖ್ಯ ಭೂಮಿಕೆಯಲ್ಲಿರುವ ತುರ್ತು ನಿರ್ಗಮನ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಯಿತು. ಈ ವೇಳೆ, ಮಾತನಾಡಿದ ಅವರು, ನಿರ್ದೇಶಕ ಹೇಮಂತ್ ಕುಮಾರ್ ಹೇಳಿದ ಕಥೆ ಇಷ್ಟವಾಯಿತು. ಯಾರೇ ನಟರು ಕೇಳಿದ್ದರೂ, ಬೇಡ ಅನ್ನದಂತಹ ಕಥೆಯನ್ನು ಹೇಮಂತ್ ಕುಮಾರ್ ಹೆಣೆದಿದ್ದಾರೆ. ಆದರಿಂದ ನಾನು ಒಪ್ಪಿಕೊಂಡೆ. ನಾನು 12 ವರ್ಷಗಳಿಂದ ಚಿತ್ರ ಮಾಡಿಲ್ಲ. ಆದರೆ, ಅಷ್ಟು ವರ್ಷಗಳ ನಂತರ ಇಂತಹ ಒಳ್ಳೆಯ ಚಿತ್ರ ಮಾಡಿದ ಖುಷಿಯಿದೆ ಎಂದರು.
ಸುನೀಲ್ ರಾವ್ಗೆ ಜೋಡಿಯಾಗಿರುವ ಹಿತ ಚಂದ್ರಶೇಖರ್ ಮಾತನಾಡಿ, ನಾವು ಬೇರೆ ಭಾಷೆಗಳಲ್ಲಿ ವಿಭಿನ್ನ ಕಥೆಯ ಚಿತ್ರಗಳು ಬಂದರೆ ಹೋಗಿ ನೋಡುತ್ತೇವೆ. "ತುರ್ತು ನಿರ್ಗಮನ" ಕೂಡ ಒಂದು ಪ್ರಯೋಗಾತ್ಮಕ ಚಿತ್ರ. ಇಂತಹ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು.
ಕಿರಿಕ್ ಪಾರ್ಟಿ ಸಂಯುಕ್ತ ಹೆಗಡೆ ಮಾತನಾಡಿ, ಈ ಚಿತ್ರದಲ್ಲಿ ಕ್ರಿಕೆಟ್ ಕೋಚ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೊಂದು ವಿಶ್ಯುವಲ್ ಟ್ರೀಟ್ ಎನ್ನಬಹುದು. ಮನೆಯಲ್ಲಿ ನೋಡುವುದಕ್ಕಿಂತ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿದರು. ನಟಿ ಅಮೃತ ಮಾತನಾಡಿ, ನನಗೆ ಮೊದಲು ನಿರ್ದೇಶಕರು ಕಥೆ ಹೇಳಿದಾಗ ಅಷ್ಟು ಅರ್ಥವಾಗಲಿಲ್ಲ. ಕ್ರಮೇಣ ನಟಿಸುತ್ತಾ ಅರ್ಥವಾಯಿತು. ಸಿನಿಮಾ ಪೂರ್ಣವಾದ ಮೇಲಂತೂ ಇಂತಹ ಚಿತ್ರದಲ್ಲಿ ನಟಿಸಿದ್ದೇನಲ್ಲ ಎಂಬ ಖುಷಿಯಿದೆ ಎಂದರು.
ನಾನು ಚಿತ್ರರಂಗಕ್ಕೆ ಬಂದು 36 ವರ್ಷಗಳಾಯಿತು. ಬೇಕಾದಷ್ಟು ಚಿತ್ರಗಳಲ್ಲಿ ಬೇರೆ, ಬೇರೆ ಪಾತ್ರಗಳನ್ನು ಮಾಡಿದ್ದೇನೆ . ಆದರೆ, ಈ ರೀತಿಯ ಪಾತ್ರ ಮಾಡಿರುವುದು ಇದೇ ಮೊದಲು. ನನ್ನ ಮೊದಲ ಚಿತ್ರ "ಆನಂದ್" ನಲ್ಲಿ ನಟಿಸಿದ್ದಾಗ ಆಗಿದ್ದ ಸಂತೋಷ ಈ ಚಿತ್ರದಲ್ಲಿ ಆಗಿದೆ ಎನ್ನುತ್ತಾರೆ ನಟಿ ಸುಧಾರಾಣಿ.
ನನ್ನ ಒಂದು ಮೊಟ್ಟೆಯ ಕಥೆ ಚಿತ್ರ ಆಗಷ್ಟೇ ರಿಲೀಸ್ ಆಗಿತ್ತು. ಆಗ ಈ ಚಿತ್ರದ ಆಡಿಷನ್ ನಡೆಯುತ್ತಿತ್ತು. ನನಗೆ ಹೇಮಂತ್ ಕುಮಾರ್ ಮೂರು ಪುಟಗಳ ಸಂಭಾಷಣೆ ಕಳುಹಿಸಿದ್ದರು. ಅದನ್ನು ನೋಡಿ ನಾನು ಈ ಸಿನಿಮಾದಲ್ಲಿ ಅಭಿನಯಿಸಬೇಕೆಂದು ನಿರ್ಧಾರ ಮಾಡಿದೆ. ಆಡಿಷನ್ ನಲ್ಲಿ ಸೆಲೆಕ್ಟ್ ಆದೆ. ಈ ಚಿತ್ರದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ರಾಜ್. ಬಿ ಶೆಟ್ಟಿ ಹೇಳಿದರು.
ನಿರ್ದೇಶಕ ಹೇಮಂತ್ ಕುಮಾರ್ ಮಾತನಾಡಿ, ನಾನು ಹೇಮಂತ್ ರಾವ್ ಬಳಿ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಚಿತ್ರಕ್ಕೆ ಕೆಲಸ ಮಾಡಿದ್ದೆ. ಸ್ವತಂತ್ರವಾಗಿ ಇದು ಮೊದಲ ಚಿತ್ರ. ಈ ರೀತಿಯ ಕಥೆ ಆಧರಿಸಿ ಚಿತ್ರ ಮಾಡಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ನನ್ನ ಚಿತ್ರತಂಡದ ಎಲ್ಲರ ಸಹಕಾರವನ್ನು ನೆನೆಯುತ್ತೇನೆ. ನಿಮ್ಮ ದುಡ್ಡಿಗೆ ಮೋಸವಾಗದ ಸಿನಿಮಾ ಮಾಡಿದ್ದೇನೆ ಎಂಬ ಭರವಸೆಯೊಂದಿಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತೇನೆ ಎಂದರು.
ಈ ಚಿತ್ರಕ್ಕೆ ಧೀರೇಂದ್ರ ದಾಸ್ ಮೂಡ್ ಸಂಗೀತವಿದ್ದು, ಪ್ರಯಾಗ್ ಛಾಯಾಗ್ರಹಣವಿದೆ. ಶರತ್ ಭಗವಾನ್, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಸದ್ಯ ಟ್ರೈಲರ್ನಿಂದ ಗಮನ ಸೆಳೆಯುತ್ತಿರುವ ತುರ್ತು ನಿರ್ಗಮನ ಚಿತ್ರ ಜೂನ್ 24 ರಂದು ಬಿಡುಗಡೆಯಾಗಲು ಸಜ್ಜಾಗಿದೆ.
ಇದನ್ನೂ ಓದಿ: 9 ವರ್ಷಗಳ ನಂತ್ರ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆದ ಎಕ್ಸ್ಕ್ಯೂಸ್ ಮಿ ಸುನೀಲ್!