ಬೆಂಗಳೂರು: ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ರುದ್ರಶಿವ ನಿರ್ದೇಶನದ 'ಶಭ್ಬಾಷ್' ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಿರ್ದೇಶಕರಾದ ಓಂ ಸಾಯಿಪ್ರಕಾಶ್ ಅವರು ತಮ್ಮ ಶಿಷ್ಯನ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ಕೊಟ್ಟರು. ಶ್ರೀ ಬಂಡೆ ಮಹಾಕಾಳಿ ಅಮ್ಮನವರ ಸನ್ನಿಧಿಯಲ್ಲಿ ಸಮಾರಂಭ ನೆರವೇರಿತು. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಕೂಡಾ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ನಿರ್ದೇಶಕ ರುದ್ರಶಿವ ಮಾತನಾಡಿ, "ಶೀರ್ಷಿಕೆಯ ಒಳಾರ್ಥವನ್ನು ಸಮರ್ಥವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯವಾಗಿ ಮಹತ್ತರವಾದುದನ್ನು ಸಾಧಿಸಿದಾಗ, ಮೆಚ್ಚುವಂತೆ ನಡೆದುಕೊಂಡಾಗ ಶಭ್ಬಾಷ್‌ಗಿರಿಯ ಮೂಲಕ ಮೆಚ್ಚಿಕೊಳ್ಳಲಾಗುತ್ತದೆ. ಹಾಗಾದರೆ, ಈ ಸಿನಿಮಾ ನಾಯಕ ಶಭ್ಬಾಷ್ ಅನ್ನಿಸಿಕೊಳ್ಳುವಂಥ ಯಾವ ಕೆಲಸ ಮಾಡುತ್ತಾನೆ?, ಯಾವ ರೀತಿಯ ಕಥೆ ಇದರ ಸುತ್ತ ಚಲಿಸುತ್ತದೆ ಎಂಬುದು ಸಿನಿಮಾ ಜೀವಾಳ. 'ಹೊಡಿರೋ ಸೆಲ್ಯೂಟ್' ಎಂಬ ಅಡಿ ಬರಹ ಹೊಂದಿರುವ ಶಭ್ಬಾಷ್ ಆ್ಯಕ್ಷನ್ ಡ್ರಾಮಾ ಜಾನರ್ ಹೊಂದಿದೆ" ಎಂದರು.

'ಶಭ್ಬಾಷ್' ಮೂಲಕ ರುದ್ರಶಿವ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ದಶಕಗಳಿಗೂ ಹೆಚ್ಚು ಕಾಲ ದಿಗ್ಗಜ ನಿರ್ದೇಶಕರ ಗರಡಿಯಲ್ಲಿ ಪಳಗಿರುವ ಇವರು, ಹೊಸ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರಂತೆ. ಶಿವಮಣಿ, ಅಯ್ಯಪ್ಪ ಶರ್ಮಾ, ಪಲ್ಲಕ್ಕಿ ರಾಧಾಕೃಷ್ಣ ಅವರಂಥ ನಿರ್ದೇಶಕರೊಂದಿಗೆ ಕಾರ್ಯನಿರ್ವಹಿಸಿದ್ದ ರುದ್ರಶಿವ, ಓಂ ಸಾಯಿಪ್ರಕಾಶ್ ನಿರ್ದೇಶನದ ಗಂಗ ಎಂಬ ಚಿತ್ರದಲ್ಲೂ ಕೆಲಸ ಮಾಡಿದ್ದರು. ಈ ಮೂಲಕ ಸಾಯಿಪ್ರಕಾಶ್ ಅವರಿಗೆ ಗುರುವಿನ ಸ್ಥಾನ ಕೊಟ್ಟಿದ್ದಾರೆ. ಹೀಗಾಗಿ ಓಂ ಸಾಯಿಪ್ರಕಾಶ್ ತಮ್ಮ ಶಿಷ್ಯನ ಮೊದಲ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿ ಪ್ರೋತ್ಸಾಹ ನೀಡಿದ್ದಾರೆ.
'ಮಳೆಬಿಲ್ಲು' ಚಿತ್ರದಲ್ಲಿ ಅಭಿನಯಿಸಿದ ಶರತ್, 'ಶಭ್ಬಾಷ್' ನಾಯಕನಾಗಿ ನಟಿಸಿದ್ದಾರೆ. ನಿಸರ್ಗ ನಾಯಕಿಯಾಗಿದ್ದಾರೆ. ವಿಶೇಷವೆಂದರೆ, ಚಿತ್ರೀಕರಣ ಶುರುವಾಗುವ ಮುನ್ನವೇ 'ಶಭ್ಬಾಷ್' ಚಿತ್ರಕ್ಕೆ ಆರು ಹಾಡುಗಳನ್ನು ರೂಪಿಸಲಾಗಿದೆ. ಈ ಹಾಡುಗಳಿಗೆ ಮ್ಯಾಡಿ ಸಂಗೀತ ಸಂಯೋಜಿಸಿದ್ದಾರೆ. ಆಂಜನೇಯನ ಕುರಿತಾದ ಹಾಡಿಗೆ ಶಂಕರ್ ಮಹಾದೇವನ್ ಧ್ವನಿಯಾಗಿದ್ದಾರೆ. ರವೀಂದ್ರ ಸೊರಗಾವಿ ಹಾಗೂ ಶಮಿತಾ ಮಲ್ನಾಡ್ ಕಂಠಸಿರಿಯಲ್ಲಿ ಒಂದು ಗೀತೆ, ಇಂದೂ ನಾಗರಾಜ್ ಹಾಗೂ ವ್ಯಾಸರಾಜ್ ಕಾಂಬಿನೇಷನ್ನಲ್ಲಿ ಒಂದು ಹಾಡು, ವಿಜಯ್ ಪ್ರಕಾಶ್ ಮತ್ತು ಅನುರಾಧ್ ಭಟ್ ಧ್ವನಿಯಲ್ಲಿ ಮತ್ತೊಂದು ಸುಮಧುರ ಗೀತೆ, ಜೋಗಿ ಪ್ರೇಮ್, ನವೀನ್ ಸಜ್ಜು ಕೂಡ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರಂತೆ.
ಮೊದಲ ಹಂತದಲ್ಲಿ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹದಿನೈದು ದಿನ ಚಿತ್ರೀಕರಣ ನಡೆಯಲಿದೆ. ಆ ನಂತರ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಚಿತ್ರೀಕರಣ ನಡೆಸಲು ಯೋಜನೆ ನಡೆದಿದೆ. ಏಸ್ 22 (ACE 22) ಬ್ಯಾನರ್‌ನಡಿಯಲ್ಲಿ ಪವೀಂದ್ರ ಮುತ್ತಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲ ತಯಾರಿಗಳನ್ನೂ ಮುಗಿಸಿರುವ ತಂಡ ಸೋಮವಾರದಿಂದ ಚಿತ್ರೀಕರಣಕ್ಕೂ ಚಾಲನೆ ನೀಡಿದೆ.
ಇದನ್ನೂ ಓದಿ: ಶ್ರೇಯಸ್ ರಾಜ್ ಶೆಟ್ಟಿ ಚೊಚ್ಚಲ ಚಿತ್ರ ಕುಲದಲ್ಲಿ ಕೀಳ್ಯಾವುದೋ ಸಿನಿಮಾಗೆ ಸಿಕ್ತು ಗುರುಗಳ ಸಾಥ್