ಭಾರತೀಯ ಚಿತ್ರರಂಗದಲ್ಲಿ 'ಅಭಿನಯ ಚಕ್ರವರ್ತಿ' ಎಂದು ಕರೆಸಿಕೊಂಡಿರುವ ಏಕೈಕ ನಟ ಕಿಚ್ಚ ಸುದೀಪ್. ಕರ್ನಾಟಕ ವಿಧಾನಸಭೆೆ ಚುನಾವಣೆಯ ರಾಜಕೀಯ ಪ್ರಚಾರದ ಬಳಿಕ ಕಿಚ್ಚ ಅಭಿನಯದ 46 ನೇ ಚಿತ್ರದ ಸಾರಥಿ ಯಾರು? ಹೀಗೊಂದು ಪ್ರಶ್ನೆ ಎಲ್ಲರಲ್ಲೂ ಇದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ 4-5 ಹೆಸರು ಚಾಲ್ತಿಯಲ್ಲಿವೆ. ಸ್ಪಷ್ಟ ಹಾಗೂ ನಿಖರವಾದ ಉತ್ತರ ಜೂನ್ 1ಕ್ಕೆ ಸಿಗಲಿದೆಯಾದರೂ, ಸದ್ಯಕ್ಕೆ ಸುದೀಪ್ ಮುಂದಿನ ಸಿನಿಮಾ ಅಂದರೆ 46ನೇ ಸಿನಿಮಾಗೆ ಹಣ ಹೂಡುವ ನಿರ್ಮಾಪಕ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಚಿಕ್ಕ, ಚೊಕ್ಕವಾದ ತುಣುಕು ಕೂಡ ಬಹಿರಂಗವಾಗಿದೆ.
ಸುದೀಪ್ ಮುಂದಿನ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ತನು ನಿರ್ಮಾಣ ಮಾಡಲಿದ್ದಾರೆ. ನೆನಪಿರಲಿ.. ಕಬಾಲಿ.. ವಿಐಪಿ .. ತುಪಾಕಿ.. ಅಸುರನ್.. ಕರ್ಣನ್.. ನಾರಪ್ಪ.. ಹೀಗೆ ಹತ್ತು ಹಲವು ವಿಶೇಷ ಹಾಗೂ ವಿಭಿನ್ನ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಕಲೈಪುಲಿ ಅವರದ್ದು.
ಹೀಗಾಗಿಯೇ, ಸುದೀಪ್ ಸೈನ್ಯ ಸದ್ಯಕ್ಕೆ ರಣಕೇಕೆ ಹಾಕ್ತಿದೆ. ಭಾರತದೆಲ್ಲೆಡೆ ಛಾಪು ಮೂಡಿಸಿರುವ ನಿರ್ಮಾಣ ಸಂಸ್ಥೆ ವಿ ಕ್ರಿಯೇಷನ್ಸ್, ತನ್ನ ನೆಚ್ಚಿನ ನಾಯಕನ ಜೊತೆ ಸಿನಿಮಾ ಮಾಡಲು ಮುಂದೆ ಬಂದಿದ್ದನ್ನು ಕಂಡು ಸುದೀಪ್ ಭಕ್ತಗಣ ಸಂಭ್ರಮಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಎದೆಯನ್ನುಬ್ಬಿಸಿ, ಅಭಿಮಾನದ ಮಾತನ್ನೂ ಆಡ್ತಿದೆ. ಯಾಕೆಂದರೆ, ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ನಮ್ಮ ಚಿತ್ರಕ್ಕೆ ನಮ್ಮವರೇ ಹಣ ಹೂಡಲು ಹಿಂದೇಟು ಹಾಕ್ತಿದ್ದರು. ಆದರೆ, ಬದಲಾದ ಕಾಲಘಟ್ಟ ಬೇರೆಯವರು ನಮ್ಮವರನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಅಭಿಮಾನಿಗಳಲ್ಲಿ ಅಭಿಮಾನ ಹೆಚ್ಚಾಗಲು ಇದಕ್ಕಿಂತ ಇನ್ನೇನು ಬೇಕು.
ಸುದೀಪ್ ಹೇಳಿ ಕೇಳಿ ಪ್ಯಾನ್ ಇಂಡಿಯಾ ನಟ. ಇವತ್ತಲ್ಲ ಸುದೀಪ್ ಆ ದಿನಗಳಲ್ಲಿಯೇ ಬೇರೆ ಭಾಷೆಯಲ್ಲಿ ಮಿಂಚಿದವರು. ಹೀಗಾಗಿಯೇ ಸಹಜವಾಗಿ ಸುದೀಪ್ ಅವರಿಗೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಬೇರೆ ಭಾಷೆಯಲ್ಲಿಯೂ ಅಭಿಮಾನಿ ಸಂಘಗಳಿವೆ. ಸುದೀಪ್ ಜೊತೆ ಒಂದು ಸಿನಿಮಾ ಮಾಡಬೇಕೆಂಬ ಹಂಬಲ ಬೇರೆ ಭಾಷೆಯ ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿಯೂ ಇದೆ. ಸುದೀಪ್ 46 ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೇ.
ಅಂದ್ಹಾಗೆ ಕಲೈಪುಲಿ ಎಸ್ ತನು ಸುದೀಪ್ ಮುಂದಿನ ಚಿತ್ರವನ್ನು ಘೋಷಿಸಿದ ಬೆನ್ನಲ್ಲಿಯೇ, ಚಿತ್ರದ ಕ್ಯಾಪ್ಟನ್ ಯಾರು ಅನ್ನುವ ಪ್ರಶ್ನೆ ಕಾಡಲು ಆರಂಭವಾಗಿದೆ. ನಿರ್ದೇಶಕ ಯಾರಿರಬಹುದು ಎಂದು ಸಂಶೋಧನೆಯನ್ನೂ ನಡೆಸಲಾಗ್ತಿದೆ. ಆ ಪೈಕಿ, ಚಿತ್ರ ಪ್ರಪಂಚದಲ್ಲಿ ವಿಜಯ್ ಹೆಸರು ಸಿಕ್ಕಾಪಟ್ಟೆ ಓಡಾಡ್ತಿದೆ.
ಸದ್ಯಕ್ಕೆ ಕೇಳಿ ಬರ್ತಿರುವ ಸುದ್ದಿಯ ಪ್ರಕಾರ ವಿಜಯ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ವಿಜಯ್, ಸುದೀಪ್ ಅವರ 46ನೇ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯಲಿದ್ದಾರೆ. ಇದು, ನಿಜಾನಾ? ಅನ್ನುವುದಕ್ಕೆ ಉತ್ತರ ಜೂನ್ 1ಕ್ಕೆ ಸಿಗಲಿದೆ. ಒಂದು ವೇಳೆ ಹರಿದಾಡುತ್ತಿರುವ ಇದೇ ಸುದ್ದಿ ನಿಜ ಆದಲ್ಲಿ, ಕನ್ನಡದ ಆರಡಿ ಕಟೌಟ್ಗೆ ತಮಿಳು ಉದ್ಯಮ ಬಹುಪರಾಕ್ ಹಾಕಿದಂತಾಗುತ್ತದೆ.
ಇನ್ನೂ, ಪುಟ್ಟದಾದ ಟೀಸರ್ ಹೊರ ಬಂದ ಬೆನ್ನಲ್ಲೇ ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಕೂಡ ಮನೆ ಮಾಡಿದೆ. ಬಲ್ಲ ಮೂಲಗಳ ಪ್ರಕಾರ ಸುದೀಪ್ ಅವರ ಸಿನಿಮಾದ ಕಥೆ ಕೂಡ ಕ್ಷಣ ಕ್ಷಣಕ್ಕೆ ಕುತೂಹಲ ಕೆರಳಿಸುವಂತೆಯೇ ಇದೆ. ಸೀಟಂಚಿಗೆ ಪ್ರೇಕ್ಷಕರನ್ನು ಕೂರಿಸಲಿದೆ. ಬಿಡುಗಡೆಯಾದ ಅನೌನ್ಸ್ಮೆಂಟ್ ವಿಡಿಯೋದಲ್ಲಿರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಇದಕ್ಕೆ ಸಾಕ್ಷಿ.
ಸುದೀಪ್ 46 ನೇ ಚಿತ್ರದ ವಿಚಾರದಲ್ಲಿ ಮನೆ ಮಾಡಿದ್ದ ಅನೇಕ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಲೈಪುಲಿ ಎಸ್ ತನು ನಿರ್ಮಾಣದಲ್ಲಿ ಚಿತ್ರ ಮೂಡಿ ಬರಲಿದೆ. ಇದು ಕಿಚ್ಚನ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹೆಚ್ಚಿಸಿರೋದಂತು ಸತ್ಯ.
ಇದನ್ನೂ ಓದಿ: ಮಗದೊಂದು ಪ್ಯಾನ್ ಚಿತ್ರಕ್ಕಾಗಿ ಮತ್ತೆ ಒಂದಾದ ತ್ರಿವಿಕ್ರಮ್ ಶ್ರೀನಿವಾಸ್-ಅಲ್ಲು ಅರ್ಜುನ್!