ಸ್ಯಾಂಡಲ್ವುಡ್ನಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಪ್ರೇಕ್ಷಕರಿಗೆ ಸಿನಿಮಾಗಳನ್ನು ಅಚ್ಚುಕಟ್ಟಾಗಿ ತಲುಪಿಸಲು ಚಿತ್ರ ತಂಡದರು ವಿಭಿನ್ನ ಪ್ರಮೋಶನ್ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಇದಕ್ಕೆ ಕೈಗನ್ನಡಿಯೇ ಸ್ಪೂಕಿ ಕಾಲೇಜ್ ಸಿನಿಮಾದ ಈ ಸ್ಟ್ಯಾಂಡೀಸ್.
ಸದ್ಯ ಟೀಸರ್ನಿಂದಲೇ ಹಾರರ್ ಸಿನಿಮಾ ಪ್ರಿಯರಿಗೆ ಇಷ್ಟ ಆಗಿರುವ ಸ್ಪೂಕಿ ಕಾಲೇಜ್ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಹಾಗು ಪ್ರಿಮಿಯರ್ ಪದ್ಮಿನಿ ಚಿತ್ರದಲ್ಲಿ ಕಾಲೇಜ್ ಬಾಯ್ ಆಗಿ ಗಮನ ಸೆಳೆದ ನಟ ವಿವೇಕ್ ಸಿಂಹ ಮುಖ್ಯ ಭೂಮಿಕೆಯಲ್ಲಿರೋ ಸ್ಪೂಕಿ ಕಾಲೇಜ್ ಚಿತ್ರತಂಡ ವಿನೂತನ ಪ್ರಚಾರಕ್ಕೆ ಕೈ ಹಾಕಿದೆ.
ಹೌದು, ಇದೇ ನವೆಂಬರ್ 25ಕ್ಕೆ ಸ್ಪೂಕಿ ಕಾಲೇಜ್ ಚಿತ್ರ ಬಿಡುಗಡೆ ಆಗಲಿದೆ. ಚಿತ್ರದ ಟೀಸರ್ ಈಗಾಗ್ಲೇ ಪ್ರೇಕ್ಷಕರ ಕೂತುಹಲ ಹೆಚ್ಚಿಸಿದೆ. ಸಿನಿಮಾ ಬಿಡುಗಡೆಗೆ ಸಕಲ ತಯಾರಿಯನ್ನೂ ಮಾಡಿಕೊಳ್ಳುತ್ತಿರುವ ಚಿತ್ರತಂಡ ಸದ್ಯ ರಾಜ್ಯದ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಆವರಣದಲ್ಲಿ ಚಿತ್ರದ ಪೋಸ್ಟರ್ವುಳ್ಳ ಸ್ಟ್ಯಾಂಡೀಸ್ಗಳನ್ನು ಇಟ್ಟಿದೆ. ಈ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರುವಂತೆ ಆಮಂತ್ರಣ ನೀಡುತ್ತಿದೆ.
ಅಂದಹಾಗೆ, ಸ್ಪೂಕಿ ಅಂದ್ರೆ ಭಯ. ಭಯದ ಈ ವಾತಾವರಣದಲ್ಲಿ ಅನೇಕ ತರಹದ ತಿರುವುಗಳಿವೆ. ಬೆಚ್ಚಿ ಬೀಳಿಸುವ ಸನ್ನಿವೇಶಗಳಿವೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಇದರ ಸುಳಿವನ್ನೂ ನೀಡಿದೆ.
ಇನ್ನು, ಸ್ಪೂಕಿ ಕಾಲೇಜ್ ಚಿತ್ರೀಕರಣ ಧಾರವಾಡದ ನೂರಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕಾಲೇಜ್ನಲ್ಲಿ ನಡೆದಿದೆ. ಈ ಪುರಾತನ ಕಾಲೇಜ್ ಜೊತೆ ದಾಂಡೇಲಿಯ ದಟ್ಟಾರಣ್ಯದಲ್ಲಿ ಕೂಡಾ ಚಿತ್ರೀಕರಣವನ್ನು ಮಾಡಲಾಗಿದೆ. ಖುಷಿ ಮತ್ತು ವಿವೇಕ್ ಸಿಂಹ ಅಲ್ಲದೇ, ಅಜಯ್ ಪೃಥ್ವಿ, ಹನುಮಂತೇಗೌಡ, ಸಿದ್ಲಿಂಗು ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಾಮನಕೊಪ್ಪ ಹೀಗೆ ಸುಮಾರು 150ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿದ್ದಾರೆ.
ಇದನ್ನೂ ಓದಿ: ಮಕ್ಕಳಿಗಾಗಿ ಗಂಧದ ಗುಡಿ ಟಿಕೆಟ್ ಬೆಲೆ ಇಳಿಕೆ: ಚಿತ್ರದ ಬಗ್ಗೆ ಮಾತನಾಡಿ, ಬಹುಮಾನ ಗೆಲ್ಲಿ!
ಆರ್ಜೆ ಆಗಿ ಹಾಗು ಮಾರ್ಕೆಟಿಂಗ್ ವಿಭಾಗದಲ್ಲಿ ಅನುಭವ ಪಡೆದಿರುವ ಭರತ್ ಜೆ ಈ ಸಿನಿಮಾದ ಸೂತ್ರಧಾರ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಹಾರರ್ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ಭರತ್ ಅವರಿಗೆ ಹಿಂದೆ ಅನೇಕ ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವವಿದೆ. ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದರೆ, ಮನೋಹರ್ ಜೋಶಿ ಕ್ಯಾಮರಾ ಕಣ್ಣಲ್ಲಿ ಚಿತ್ರ ಸೆರೆಯಾಗಿದೆ.
ಇದನ್ನೂ ಓದಿ: 'ಅಪ್ಪು ಎಂದರೆ ಅಪ್ಪುಗೆ' - ಪುನೀತ್ ಜೊತೆಗಿನ ತಮ್ಮ ಒಡನಾಟ ಸ್ಮರಿಸಿದ ಹಿರಿಯ ನಟರು
ನವೆಂಬರ್ 25ಕ್ಕೆ ಬಿಡುಗಡೆ ಆಗಲಿರುವ ಸ್ಪೂಕಿ ಕಾಲೇಜ್ ಚಿತ್ರದ ಪ್ರಚಾರ ಆರಂಭವಾಗಿದೆ. ರಾಜ್ಯದ ಅನೇಕ ಕಡೆ ಚಿತ್ರದ ಪ್ರಚಾರ ನಡೆಯುತ್ತಿದೆ. ಚಿತ್ರಮಂದಿರದ ಆವರಣದಲ್ಲಿ ಇಡಲಾದ ಸ್ಟ್ಯಾಂಡೀಸ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.