ಒಬ್ಬ ಕಲಾವಿದ ಯಾವೆಲ್ಲಾ ಭಾವಗಳಲ್ಲಿ ನಟಿಸಬಲ್ಲನೋ, ಆ ಎಲ್ಲಾ ಭಾವಗಳನ್ನು ಗೀತೆಯಲ್ಲಿಯೇ ಪ್ರಸ್ತುತಪಡಿಸುವ ಚಾತುರ್ಯ ಹೊಂದಿದ್ದ ಏಕೈಕ ಗಾಯಕ ಅಂದ್ರೆ ಎಸ್ ಪಿ ಬಾಲಸುಬ್ರಹ್ಮಣ್ಯಂ. ಜೀವನದಲ್ಲಿ ಇಂಜಿನಿಯರ್ ಆಗಬೇಕು ಅಂದುಕೊಂಡಿದ್ದ, ಎಸ್ಪಿಬಿ ಸಂಗೀತ ಕ್ಷೇತ್ರದಲ್ಲಿ ವರ್ಸಿಟೈಲ್ ಗಾಯಕನಾಗಿ ಯಶಸ್ಸು ಕಂಡಿದ್ದು ಅಮೋಘ. ಈ ಅದ್ಭುತ ಹಾಡುಗಳ ಮೋಡಿಗಾರ ಬಾಲಸುಬ್ರಹ್ಮಣ್ಯಂ ಅಗಲಿ ಸೋಮವಾರ (ಸೆ. 25, 2023)ಕ್ಕೆ 3 ವರ್ಷ.
- " class="align-text-top noRightClick twitterSection" data="">
ಭಾರತದ 16 ಭಾಷೆಗಳಲ್ಲಿ ಗಾಯನದ ಚಾತುರ್ಯ ತೋರಿಸಿರುವ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡದಲ್ಲಿ ಸಿಕ್ಕಿರುವ ಮನ್ನಣೆ ಅಪಾರ. ಮತ್ತೊಂದು ವಿಶೇಷ ಅಂದ್ರೆ ಕನ್ನಡಾಭಿಮಾನ ಹೊಂದಿರುವ ಬಹುತೇಕ ಹಾಡುಗಳನ್ನು ಎಸ್ಪಿಬಿ ಹಾಡಿದ್ದು, ಎಲ್ಲವೂ ಸೂಪರ್ ಹಿಟ್ ಆಗಿವೆ. ಅವರು ಹಾಡಿರುವ ಕನ್ನಡ ಗೀತೆಗಳ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳು ಇಲ್ಲಿವೆ.
ಕನ್ನಡಾಭಿಮಾನದ ಹಾಡುಗಳಿಗೆ ಧ್ವನಿಯಾದ ಎಸ್ಪಿಬಿ: 'ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ದೊರಕಿಲ್ಲ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಜನಿಸಲು ಬಯಸುತ್ತೇನೆ' ಈ ಮಾತನ್ನು ಅಂದು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರೇ ಹೇಳಿದ್ದರು. ಅವರು ಕನ್ನಡದ ಬಗ್ಗೆ ಹಾಡಿದ ಮೊಟ್ಟ ಮೊದಲ ಹಾಡು 1983ರಲ್ಲಿ ಬಂದ ತಿರುಗ ಬಾಣ ಚಿತ್ರದ 'ಇದೇ ನಾಡು, ಇದೇ ಭಾಷೆ'. ಅಂಬರೀಶ್, ಆರತಿ, ಜಯಮಾಲ ಅಲ್ಲದೇ ಬಾಲಸುಬ್ರಹ್ಮಣ್ಯಂ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದರು.
ಇದೇ ನಾಡು, ಇದೇ ಭಾಷೆ ಇಂದಿಗೂ ಎಲ್ಲರೂ ಗುನುಗುತ್ತಿರುತ್ತಾರೆ. ಕನ್ನಡ ರಾಜ್ಯೋತ್ಸವ ಬಂತು ಅಂದ್ರೆ ಸಾಕು, ಇಡೀ ಕರ್ನಾಟಕದಾದ್ಯಂತ ಈ ಹಾಡು ಕೇಳಿ ಬರುತ್ತೆ. ಗೀತರಚನೆಕಾರ ಆರ್.ಎನ್ ಜಯಗೋಪಾಲ್ ಬರೆದಿದ್ದ ಸಾಹಿತ್ಯಕ್ಕೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಾಗಿದ್ದರು. ಸಂಗೀತ ನಿರ್ದೇಶಕ ಸತ್ಯಂ ರಾಗ ಸಂಗೀತ ಸಂಯೋಜನೆ ನೀಡಿದ್ದರು.
ಈ ಹಾಡಿನ ಬಳಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ 'ನಾನು ನನ್ನ ಹೆಂಡ್ತಿ' ಚಿತ್ರದಲ್ಲಿ ಮತ್ತೊಂದು ಹಾಡು ಹಾಡಿದ್ದರು. ರವಿಚಂದ್ರನ್ ಹಾಗೂ ಊರ್ವಶಿ ಅಭಿನಯದ ಈ ಚಿತ್ರದಲ್ಲಿ ಕನ್ನಡಾಭಿಮಾನದ ಬಗ್ಗೆ ಎಸ್ಪಿಬಿ ಕರುನಾಡ ತಾಯಿ.. ಸದಾ ಚಿನ್ಮಯಿ ಅಂತಾ ಹೇಳಿದ್ದು ಪ್ರತಿಯೊಬ್ಬ ಕನ್ನಡಿಗರು ಎದ್ದು ಕುಣಿಯುವಂತೆ ಮಾಡಿತ್ತು. ಹಂಸಲೇಖ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಶಂಕರ್ ಗಣೇಶ್ ಸಂಗೀತ ನೀಡಿದ್ದರು.
ಇನ್ನು ಎಸ್ ಬಿ ಬಾಲಸುಬ್ರಹ್ಮಣ್ಯಂ ಆಂಧ್ರದಲ್ಲಿ ಹುಟ್ಟಿ ಬೆಳೆದರೂ, ಹಿನ್ನೆಲೆ ಗಾಯಕನಾಗಿ ಹಾಡಿದ ಎರಡನೇ ಹಾಡೇ ಕನ್ನಡದಲ್ಲಿ ಅನ್ನೋದು ವಿಶೇಷ. 1992ರಲ್ಲಿ ಬಾಲಸುಬ್ರಹ್ಮಣ್ಯಂ ಎರಡು ಹಿಟ್ ಸಿನಿಮಾಗಳಿಗೆ ಎರಡು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ, ನಾ ಆರಾಧಿಸುವೆ ಎಂಬ ಹಿಟ್ ಹಾಡನ್ನು ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಶ್ಯಾಮ್ ಸುಂದರ್ ಕುಲಕರ್ಣಿ ಅವರು ಬರೆದಿದ್ದ ಈ ಹಾಡು ಎಸ್ಪಿಬಿ ಕಂಠದಲ್ಲಿ ಮೂಡಿಬಂದಿತ್ತು. ರಾಜನ್ ನಾಗೇಂದ್ರ ಈ ಕನ್ನಡದ ಹಾಡಿಗೆ ಅದ್ಭುತ ಟ್ಯೂನ್ಸ್ ಹಾಕಿದ್ದರು.
ಇದರ ಜೊತೆಗೆ ಅಂಬರೀಶ್ ಅಭಿನಯದ ಸೋಲಿಲ್ಲದ ಸರದಾರ ಚಿತ್ರದಲ್ಲೂ ಕನ್ನಡದ ಬಗ್ಗೆ ಮೈ ಜುಮ್ಮೆನಿಸುವ ಹಾಡು ಇದೆ. ಹಂಸಲೇಖ ಬರೆದು, ಸಂಗೀತ ನೀಡಿರುವ, ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕನ್ನಡ.. ರೋಮಾಂಚನ ಕನ್ನಡ.. ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ ಹಾಡು ಹಿಟ್ ಹಾಡುಗಳಲ್ಲಿ ಒಂದು. ವಿಷ್ಣುವರ್ಧನ್ ಅವರ ಚೊಚ್ಚಲ ಸಿನಿಮಾ ನಾಗರಹಾವು. ಈ ಚಿತ್ರ ಸಾಕಷ್ಟು ಕಲಾವಿದರಿಗೆ ದೊಡ್ಡ ಮಟ್ಟದ ಬ್ರೇಕ್ ನೀಡುತ್ತದೆ. ಇದೇ ಸಿನಿಮಾಗೆ ಹಿನ್ನೆಲೆ ಗಾಯಕರಾಗಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂಗೆ ಕೆರಿಯರ್ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಡುತ್ತದೆ. ಹಾವಿನ ದ್ವೇಷ 12 ವರುಷ ಎಂದು ಹಾಡಿದ ಎಸ್ಪಿಬಿ ಅಂದಿನಿಂದ ವಿಷ್ಣುವರ್ಧನ್ ಸಿನಿಮಾಗಳಿಗೆ ಖಾಯಂ ಗಾಯಕರಾಗುತ್ತಾರೆ.
ವೀರಪ್ಪನಾಯ್ಕ ಹಾಗೂ ಸಿಂಹಾದ್ರಿಯ ಸಿಂಹ ಸಿನಿಮಾದಲ್ಲಿ ಭಾರತಾಂಭೆಯ ನಿನ್ನ ಜನ್ಮ ದಿನ ಎಂಬ ಹಾಡನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಎಸ್ ನಾರಾಯಣ್ ಬರೆದಿದ್ದ ಪದಗಳಿಗೆ, ಎಸ್ಪಿಬಿ ಧ್ವನಿಯಾಗಿದ್ದರು. ರಾಜೇಶ್ ರಾಮಾನಾಥ್ ಸಂಗೀತ ನೀಡಿದ್ದರು. ಸಿಂಹಾದ್ರಿಯಾ ಸಿಂಹ ಚಿತ್ರದಲ್ಲಿ ಕಲ್ಲಾದರೆ ನಾನು ಬೇಲೂರಿನ ಗುಡಿಯಲ್ಲಿರುವೆ ಎಂಬ ಹಾಡನ್ನು ಎಸ್ಪಿಬಿ ಅಷ್ಟೇ ಸೊಗಸಾಗಿ ಹಾಡಿದ್ದರು.
ಇನ್ನು, 1999ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಕನ್ನಡದ ಹಾಡು ಅಂದ್ರೆ ಓ ಮೈ ಸನ್. ಶಿವ ರಾಜ್ಕುಮಾರ್ ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅಭಿನಯದ ಎಕೆ 47 ಸಿನಿಮಾ. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಒಬ್ಬ ದೇಶಭಕ್ತ ತಂದೆ ಮಗನಿಗೆ ದೇಶಾಭಿಮಾನಿಯಾಗು ಎಂದು ಹೇಳುವ ಹಾಡು. ಹಂಸಲೇಖ ಸಾಹಿತ್ಯ ಬರೆದು ಮ್ಯೂಜಿಕ್ ನೀಡಿದ್ದ ಓ ಮೈ ಸನ್ ಹಾಡನ್ನು ಎಸ್ಪಿಬಿ ಹಾಡಿದ್ದರು.
ಸಿನಿಮಾ ಗೀತೆ, ಕನ್ನಡ ಪ್ರೇಮ ಮೆರೆಯುವ ಹಾಡು, ಭಕ್ತಿ ಗೀತೆಗಳು ಸೇರಿ ಬರೋಬ್ಬರಿ ನಲವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುಗಳಿಗೆ ಎಸ್ಪಿಬಿ ಧ್ವನಿಯಾಗಿದ್ದಾರೆ. ಕನ್ನಡದಲ್ಲೇ 8000 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರೋದು ವಿಶೇಷ. ಜೊತೆಗೆ ಈಟಿವಿ ಕನ್ನಡ ವಾಹಿನಿ ಮೂಲಕ ಎದೆ ತುಂಬಿ ಹಾಡುವೆನು ಎಂಬ ಖ್ಯಾತ ಸಂಗೀತ ಕಾರ್ಯಕ್ರಮದ ಮೂಲಕವೂ ನೂರಾರು ಹೃದಯಕ್ಕೆ ಮತ್ತಷ್ಟು ಸನಿಹವಾಗಿದ್ದರು.
ಇದನ್ನೂ ಓದಿ: ಗಾನ ಗಂಧರ್ವನ ಮೂರನೇ ವರ್ಷದ ಪುಣ್ಯಸ್ಮರಣೆ: ಕರ್ನಾಟಕದ ಜೊತೆ ಎಸ್ಪಿಬಿ ನಂಟು ಹೀಗಿತ್ತು..