ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಜೀನ್ ಪಾಲ್ ಲಾಲ್ ಮುಂಬರುವ ಚಿತ್ರ 'ನಾಡಿಕರ್ ತಿಲಕಂ'. ಸ್ಟಾರ್ ನಟ ಟೋವಿನೋ ಥಾಮಸ್ ಮತ್ತು ಸೌಬಿನ್ ಶಾಹಿರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಸಿನಿಮಾದ ಶೀರ್ಷಿಕೆ ಬದಲಾಯಿಸುವಂತೆ ದಿವಂಗತ ನಟ ಶಿವಾಜಿ ಗಣೇಶನ್ ಅವರ ಅಭಿಮಾನಿಗಳ ಸಂಘ ಚಿತ್ರತಂಡಕ್ಕೆ ಒತ್ತಾಯಿಸಿದೆ.
ತಮಿಳು ಚಿತ್ರರಂಗದ ದಿವಂಗತ ನಟ ಮತ್ತು ನಿರ್ಮಾಪಕ ಶಿವಾಜಿ ಗಣೇಶನ್ ಅವರನ್ನು 'ನಾಡಿಕರ್ ತಿಲಕಂ' ಎಂದೇ ಕರೆಯುತ್ತಾರೆ. ಈ ಹೆಸರಿನಿಂದಲೇ ಅವರು ಹೆಚ್ಚು ಖ್ಯಾತರಾಗಿದ್ದಾರೆ. ಹೀಗಾಗಿ ಟೋವಿನೋ ಥಾಮಸ್ ನಟನೆಯ ಮುಂದಿನ ಸಿನಿಮಾಗೆ ಈ ಶೀರ್ಷಿಕೆ ನೀಡಿರುವುದು ಶಿವಾಜಿ ಗಣೇಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರತಂಡದ ವಿರುದ್ಧ ನಾಡಿಗರ್ತಿಲಗಂ ಶಿವಾಜಿ ಸಮೂಗನಾಳ ಪೆರವ ಎಂಬ ಅಭಿಮಾನಿಗಳ ಸಂಘ ಕಿಡಿ ಕಾರಿದೆ.
ಶಿವಾಜಿ ಗಣೇಶನ್ ಅಭಿಮಾನಿಗಳ ಸಂಘವು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA- Association of Malayalam Movie Artistes) ಮತ್ತು ಇತರೆ ಚಲನಚಿತ್ರ ಅಸೋಸಿಯೇಶನ್ಗಳಿಗೆ ಪತ್ರ ಬರೆದಿದೆ. ಈ ಕಾಮಿಡಿ ಸಿನಿಮಾಗೂ ನಟನಿಗೂ ಯಾವುದೇ ಸಂಬಂಧ ಇಲ್ಲವಾದ್ದರಿಂದ ಚಿತ್ರದ ಹೆಸರನ್ನು ಬದಲಾಯಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಎಸ್ತರ್ ನರೋನ್ಹಾ ಚೊಚ್ಚಲ ನಿರ್ದೇಶನದ 'ದಿ ವೆಕೆಂಟ್ ಹೌಸ್' ಸಿನಿಮಾ ನವೆಂಬರ್ 10ರಂದು ಬಿಡುಗಡೆ
ನಾಡಿಗರ್ತಿಲಗಂ ಶಿವಾಜಿ ಸಮೂಗನಾಳ ಪೆರವದ ಅಧ್ಯಕ್ಷ ಕೆ.ಚಂದ್ರಶೇಖರನ್ ಅವರು, ಶಿವಾಜಿ ಗಣೇಶನ್ ಅವರನ್ನು ನಾಡಿಕರ್ ತಿಲಕಂ ಎಂದೇ ಕರೆಯುತ್ತಾರೆ. ಈ ಹೆಸರನ್ನು ಬೊಮ್ಮಾಯಿ ಮ್ಯಾಗಜೀನ್ನಲ್ಲಿ ಅಭಿಮಾನಿಯೊಬ್ಬರು ಅವರಿಗೆ ನೀಡಿದರು. ಅಂದಿನಿಂದ ಅದೇ ಹೆಸರಿನಿಂದ ಅವರು ಗುರುತಿಸಿಕೊಂಡಿದ್ದಾರೆ. ಒಂದು ಸಿನಿಮಾಗೆ 'ನಾಡಿಕರ್ ತಿಲಕಂ' ಎಂದು ಶೀರ್ಷಿಕೆ ನೀಡಿದರೆ, ಅದು ಶಿವಾಜಿ ಗಣೇಶನ್ ಅವರ ಜೀವನಚರಿತ್ರೆಯ ಚಿತ್ರವೆಂದು ಎಲ್ಲರೂ ಭಾವಿಸುತ್ತಾರೆ. ಹೀಗಾಗಿ ಈ ಶೀರ್ಷಿಕೆ ನಮ್ಮ ಆಕ್ಷೇಪವಿದೆ ಎಂದು ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಕೇರಳದ ವಿವಿಧ ಸಂಘಟನೆಗಳಿಗೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ. ಆದರೆ, ಆಕ್ಷೇಪಣೆಯನ್ನು ಚೆನ್ನೈನಲ್ಲಿ ದಾಖಲಿಸಲು ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ತಿಳಿಸಲಾಯಿತು. ಆ ಸಮಯದಲ್ಲಿ ಎಸ್‌ಐಎಫ್‌ಸಿಸಿ ಅಧ್ಯಕ್ಷ ಶ್ರೀ ರವಿ ಕೊಟ್ಟಾರಕ್ಕರ ಅವರು ಮುಂಬೈನಲ್ಲಿದ್ದರು. ಅವರು ಹಿಂತಿರುಗಿ ವಿಷಯವನ್ನು ತಿಳಿಸುವುದಾಗಿ ಭರವಸೆ ನೀಡಿದರು. ಒಟ್ಟಿನಲ್ಲಿ ಇದು ಶಿವಾಜಿ ಗಣೇಶನ್ ಜೀವನ ಚರಿತ್ರೆಯ ಸಿನಿಮಾ ಅಲ್ಲದಿರುವುದಿಂದ ಈ ಚಿತ್ರದ ಶೀರ್ಷಿಕೆಗೆ ಬದಲಾಯಿಸಲು ಚಂದ್ರಶೇಖರನ್ ಬಲವಾಗಿ ಆಕ್ಷೇಪಿಸಿದರು.
'ನಾಡಿಕರ್ ತಿಲಕಂ' ಚಿತ್ರದಲ್ಲಿ ಟೋವಿನೋ ಥಾಮಸ್ ಸೂಪರ್ ಸ್ಟಾರ್ ಡೇವಿಡ್ ಪಡಿಕ್ಕಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೀನ್ ಪಾಲ್ ಲಾಲ್ ಆಕ್ಷನ್ ಕಟ್ ಹೇಳಿದ್ದಾರೆ. ಸುಮಾರು 40 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ತಯಾರಾಗಿದೆ. ವಿವಿಧ ಸ್ಥಳಗಳಲ್ಲಿ 120 ದಿನಗಳ ಚಿತ್ರೀಕರಣ ನಡೆಯಲಿದೆ.
ಇದನ್ನೂ ಓದಿ: ಸುದೀಪ್ ಸೇರಿದಂತೆ ಸ್ಟಾರ್ ನಟರಿಂದ ಅನಾವರಣಗೊಳ್ಳಲಿದೆ 'ಇಂಡಿಯನ್ 2' ಫಸ್ಟ್ ಗ್ಲಿಂಪ್ಸ್