ಹಾರರ್ ಕಥೆಗೆ ರವಿರಾಜ್ ನಿರ್ಮಾಪಕ.. ಸ್ಯಾಂಡಲ್ವುಡ್ಗೆ ರಾಧಿಕಾ ಕುಮಾರಸ್ವಾಮಿ ಸಹೋದರನ ಎಂಟ್ರಿ - ಈಟಿವಿ ಭಾರತ ಕನ್ನಡ
ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ನಿರ್ಮಾಪಕರಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.
Published : Oct 10, 2023, 1:52 PM IST
ಸೌಂದರ್ಯ ಮತ್ತು ಅಭಿನಯದಿಂದಲೇ ಕನ್ನಡ ಸಿನಿಮಾರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ. ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡಿರುವ ಸ್ಯಾಂಡಲ್ವುಡ್ ಸ್ವೀಟಿ, ಶಮಿಕಾ ಎಂಟರ್ಪ್ರೈಸಸ್ ಮೂಲಕ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಅವರ ಸಹೋದರ ರವಿರಾಜ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿರ್ಮಾಪಕನಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.
ಆದರೆ, ರವಿರಾಜ್ ಅವರಿಗೆ ಸಿಮಾ ರಂಗ ಹೊಸತೇನಲ್ಲ. ರಾಧಿಕಾ ಅವರ ಶಮಿಕಾ ಎಂಟರ್ಪ್ರೈಸಸ್ ಮೂಲಕ ಸಹ ನಿರ್ಮಾಪಕರಾಗಿ ಕೆಲಸ ಮಾಡಿರುವ ಅನುಭವ ಅವರಿಗಿದೆ. 'ಲಕ್ಕಿ', 'ಸ್ವೀಟಿ ನನ್ನ ಜೋಡಿ', ಭೈರಾದೇವಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಚಿತ್ರ ವಿತರಣೆ ವಿಭಾಗದಲ್ಲೂ ಕೈಯಾಡಿಸಿದ್ದಾರೆ. ಆದರೀಗ ರವಿರಾಜ್ ಸ್ವತಂತ್ರ ನಿರ್ಮಾಪಕರಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ರವಿರಾಜ್ ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದು, ಈಗಾಗಲೇ ಮೊದಲ ಸಿನಿಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ತಮ್ಮ ಕನಸಿನ ನಿರ್ಮಾಣ ಸಂಸ್ಥೆಗೆ 'ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್' ಎಂದು ಹೆಸರಿಟ್ಟಿದ್ದಾರೆ. ಅಂದ ಹಾಗೆ, ಇದು ರವಿರಾಜ್ ಅವರ ತಂದೆಯ ಕನಸಿನ ಬ್ಯಾನರ್. ಅಪ್ಪನ ಕನಸನ್ನು 'ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್' ಮೂಲಕ ರವಿರಾಜ್ ನನಸು ಮಾಡಿದ್ದಾರೆ. ಈ ಬ್ಯಾನರ್ ಅಡಿ ಮೊದಲ ಸಿನಿಮಾವಾಗಿ ಹಾರರ್ ಚಿತ್ರ ಬಿಡುಗಡೆಗೆ ತಯಾರಾಗಿದೆ.
ಇದನ್ನೂ ಓದಿ: ಅರ್ಜುನ್ ಸರ್ಜಾ - ರಾಧಿಕಾ ಕುಮಾರಸ್ವಾಮಿ ಅಭಿನಯದ ಒಪ್ಪಂದ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್!
ಇದುವರೆಗೂ ಕಂಡಿರದ, ಕೇಳಿರದ ಹಾರರ್ ಸಬ್ಜೆಕ್ಟ್ ಮೂಲಕ ಅಭಿಮಾನಿಗಳನ್ನು ಭಯ ಬೀಳಿಸಲು ರವಿರಾಜ್ ಹಾಗೂ ತಂಡ ತಯಾರಾಗಿದ್ದಾರೆ. ರವಿರಾಜ್ ಚೊಚ್ಚಲ ನಿರ್ಮಾಣದ ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ಸ್ ನಟಿಸಿದ್ದಾರೆ. ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಈ ಹಾರರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ? ನಿರ್ದೇಶಕ ಯಾರು? ಎಂಬೆಲ್ಲಾ ಪ್ರಶ್ನೆಗಳನ್ನು ನಿರ್ಮಾಪಕ ರವಿರಾಜ್ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ. ಈ ಹಾರರ್ ಕಥೆಯಾಧಾರಿತ ಚಿತ್ರ ಅತೀ ಶೀಘ್ರದಲ್ಲೇ ರವಿರಾಜ್ ಪ್ರೇಕ್ಷಕರ ಮುಂದೆ ಇಡಲಿದ್ದಾರೆ.
ರವಿರಾಜ್ 'ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್' ಬ್ಯಾನರ್ ಮೂಲಕ ಉತ್ತಮ ಸಿನಿಮಾಗಳನ್ನು ಮಾಡುವ ಆಸೆ ಇಟ್ಟುಕೊಂಡಿದ್ದಾರೆ. ವರ್ಷಕ್ಕೆ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಬೇಕು ಅನ್ನೋದು ಅವರ ಕನಸು. ಸದ್ಯ ಹಾರರ್ ಸಿನಿಮಾ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸಹೋದರಿ ರಾಧಿಕಾ ಈಗಾಗಲೇ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ತಂಗಿಯ ಹಾಗೆಯೇ ಅಣ್ಣ ಕೂಡ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಎನ್ನುವುದು ಸಿನಿ ಪ್ರೇಮಿಗಳ ಆಶಯ.
ಇದನ್ನೂ ಓದಿ: ಸಪ್ತ ಭಾಷೆಗಳಲ್ಲಿ 'ಅಜಾಗ್ರತ'ರಾಗಿ ಬರ್ತಿದಾರೆ ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ