ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಉಪ್ಪು ಹುಳಿ ಖಾರ, ನಾತಿಚರಾಮಿ, ಪಡ್ಡೆಹುಲಿ, 100 ಸಿನಿಮಾ, ಗಾಳಿಪಟ 2.. ಹೀಗೆ ವಿಭಿನ್ನ ಶೈಲಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ ಎಂ. ರಮೇಶ್ ರೆಡ್ಡಿ ವಿಶೇಷ ಛಾಪು ಮೂಡಿಸಿದ್ದಾರೆ. ಇವರು ಇದೀಗ ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಬಾಲಿವುಡ್ ಚಿತ್ರನಿರ್ಮಾಣಕ್ಕೂ ಮುಂದಾಗಿದ್ದಾರೆ.
ಐರಾವತ ಸಿನಿಮಾ ಮೂಲಕ ಕನ್ನಡದಲ್ಲಿ ನಟಿಸಿದ್ದ ಊರ್ವಶಿ ರೌಟೇಲಾ ಜೊತೆಗೆ ನಿರ್ಮಾಪಕ ಎಂ. ರಮೇಶ್ ರೆಡ್ಡಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ 'ದಿಲ್ ಹೈ ಗ್ರೇ' ಟೈಟಲ್ ಇಟ್ಟು ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ. ಮೂರು ಪ್ರಧಾನ ಪಾತ್ರಗಳಲ್ಲಿ ಸಿನಿಮಾ ಸಾಗಲಿದೆ.
ಊರ್ವಶಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿನೀತ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡರೆ, ಅಕ್ಷಯ್ ಆನ್ಲೈನ್ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಸಿ ಗಣೇಶನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ತಾರಿಕ್ ಮಹಮ್ಮದ್, ನವೀನ್ ಪ್ರಕಾಶ್ ಚಿತ್ರದ ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ.
ಈ ಬಗ್ಗೆ ಒಂದಷ್ಟು ಮಾಹಿತಿ ನೀಡುವ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರದ ಕಥೆಯೇ ರೋಚಕವಾಗಿದೆ. ಈ ಸಿನಿಮಾದಲ್ಲಿ ಕಥೆಯೇ ಹೀರೋ. ಕ್ರೈಂ ಥ್ರಿಲ್ಲರ್ ಎಳೆಯಲ್ಲಿ ಸಾಗುವ ಈ ಸಿನಿಮಾ ಪ್ರಸ್ತುತ ಕಾಲಘಟ್ಟ ಸೂಕ್ತವಾಗಿದೆ. ಇಂಥ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕರು ಮತ್ತವರ ತಂಡ ಯಶಸ್ವಿಯಾಗಿದೆ. ಬಹುತೇಕ ಕೆಲಸಗಳು ಮುಕ್ತಾಯದ ಹಂತದಲ್ಲಿದೆ. ಜುಲೈನಲ್ಲಿ ತೆರೆಗೆ ಬರಲಿದ್ದೇವೆ ಎಂದರು.
ಇದನ್ನೂ ಓದಿ: 'ಮ್ಯೂಟ್' ಟ್ರೈಲರ್ ಅನಾವರಣ ಮಾಡಲಿರುವ ಬಾಲಿವುಡ್ ನಟಿ ರವೀನಾ ಟಂಡನ್