ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಪ್ರೆಶ್ ಕಥೆ ಹೊಂದಿರುವ ಸಿನಿಮಾವೊಂದಕ್ಕೆ 'ಮತ್ತೆ ಮತ್ತೆ' ಎಂಬ ಶೀರ್ಷಿಕೆ ಇಡಲಾಗಿದೆ. ಜರ್ನಲಿಸಂ ಮುಗಿಸಿ, ಸಿನಿಮಾ ಮಾಡಲು ಹೊರಟ ಐವರು ವಿದ್ಯಾರ್ಥಿಗಳ ಸುತ್ತ ನಡೆಯುವ ಕಥೆಯೇ 'ಮತ್ತೆ ಮತ್ತೆ' ಚಿತ್ರ. ಲೆಕ್ಚರರ್ ಡಾ. ಅರುಣ್ ಹೊಸಕೊಪ್ಪ ಅವರೇ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಟ್ರೇಲರ್ ಜೊತೆಗೆ ಹಾಡುಗಳಿಂದ ಸದ್ದು ಮಾಡುತ್ತಿರುವ 'ಮತ್ತೆ ಮತ್ತೆ' ಸಿನಿಮಾದಲ್ಲಿ ರೆಟ್ರೋ ಅವತಾರದಲ್ಲಿ ಹಿರಿಯ ನಟ ಉಮೇಶ್, ನಟಿ ಸಂಜನಾ ಗಲ್ರಾನಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಡುಯ್ಯೆಟ್ ಸಾಂಗ್ಗೆ ಡ್ಯಾನ್ಸ್ ಮಾಡಿದ್ದಾರೆ. ತಮ್ಮ ಚಿತ್ರದ ಬಗ್ಗೆ ಚಿತ್ರತಂಡ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.
ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ಎಂ.ಎಸ್. ಉಮೇಶ್ ಮಾತನಾಡಿ, ಈ ಚಿತ್ರ ಅರುಣ್ ಅವರ ಕನಸಿನ ಕೂಸು. ಇಲ್ಲಿ ಕಥೆಯೇ ಹೀರೋ. ಮನದೀಪ್ ರಾಯ್, ಸತ್ಯಜಿತ್, ರಾಕ್‌ಲೈನ್ ಸುಧಾಕರ್ ಇಂದು ನಮ್ಮೊಂದಿಗಿಲ್ಲ. ಆದರೆ, ಈ ಚಿತ್ರ ಅವರನ್ನು ಜೀವಂತವಾಗಿರಿಸಿದೆ. ಅರುಣ್ ಚಿತ್ರಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಬೇರೆಯವರಾಗಿದ್ದರೆ ಅರ್ಧಕ್ಕೇ ಬಿಟ್ಟಿರುತ್ತಿದ್ದರು. ಅರುಣ್ ಅವರ ಶ್ರಮಕ್ಕೆ ಫಲ ಸಿಗಬೇಕು. ಈ ಚಿತ್ರ ಯಶಸ್ವಿಯಾದರೆ ಹತ್ತಾರು ಜನಕ್ಕೆ ಅನ್ನ ಸಿಕ್ಕಂತೆ. ಚಿತ್ರದಲ್ಲಿ ನನ್ನದು ಮನೆ ಮಾಲೀಕನ ಪಾತ್ರ. ಸಂಜನಾ ಅವರ ಜೊತೆ ಡ್ರೀಮ್ ಸಾಂಗ್ ಮಾಡಿದ್ದೇನೆ. ಅಣ್ಣಾವ್ರನ್ನು ನೆನಪಿಸುವ ಹಾಡದು ಎಂದು ತಿಳಿಸಿದರು.
ಚಿತ್ರದಲ್ಲಿ ಉಮೇಶ್ ಜೊತೆ ಸಿಹಿಕಹಿ ಚಂದ್ರು ಅವರು ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜನಾ ಗಲ್ರಾನಿ ಅವರದ್ದು ಚಿಕ್ಕ ಪಾತ್ರವಾದರೂ ಕಥೆಗೆ ತಿರುವು ತಂದು ಕೊಡುತ್ತದೆ. ಉಳಿದಂತೆ ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಶಂಖನಾದ ಅಂಜಿನಪ್ಪ, ಪ್ರಕಾಶ್ ತುಮ್ಮಿನಾಡ್, ಶ್ರೀನಿವಾಸ್ ಗೌಡ, ವೈಷ್ಣವಿ ಮೆನನ್, ತುಮಕೂರು ಮೋಹನ್ ಕೋಟೆ ಪ್ರಭಾಕರ್, ಆರ್.ಜೆ ವಿಕ್ಕಿ, ಸ್ವಾತಿ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ.
ನಿರ್ಮಾಪಕ ಕಮ್ ನಿರ್ದೇಶಕ ಡಾ. ಅರುಣ್ ಹೊಸಕೊಪ್ಪ ಮಾತನಾಡಿ, ಇದು ಸಂಪೂರ್ಣ ಕಾಮಿಡಿ ಜಾನರ್ ಸಿನಿಮಾ. ನಾನೊಬ್ಬ ಉಪನ್ಯಾಸಕ. ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತು, ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎಂದು ಈ ಕಥೆ ರೆಡಿಮಾಡಿದೆ. ಚಿಕ್ಕ ಪಾತ್ರದಲ್ಲೂ ಅಭಿನಯಿಸಿದ್ದೇನೆ. ಜರ್ನಲಿಸಂ ಮುಗಿಸಿರುವ 5 ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಅಂತ ಯೋಚಿಸಿ ನಂತರ ಅವರೆಲ್ಲ ಸೇರಿ ಸಿನಿಮಾವೊಂದನ್ನು ನಿರ್ಮಿಸಿ, ಅದರಿಂದ ಬಂದ ಹಣದಲ್ಲಿ ಒಂದು ಚಾನಲ್ ಪ್ರಾರಂಭಿಸಲು ಯೋಚಿಸುತ್ತಾರೆ. ಆ ಹಂತದಲ್ಲಿ ಏನೆಲ್ಲ ಆಗಿಹೋಯ್ತು? ಸಾಕಷ್ಟು ಅಡೆತಡೆಗಳನ್ನು ಎದುರಿಸಿ, ಕೊನೆಗೂ ಅವರು ಸಿನಿಮಾ ಮಾಡಿ ಮುಗಿಸಿದರೇ-ಇಲ್ಲವೇ? ಎನ್ನುವುದೇ 'ಮತ್ತೆ ಮತ್ತೆ' ಚಿತ್ರದ ಕಥಾಹಂದರ.
ಇದನ್ನೂ ಓದಿ: 'ಬ್ಯಾಚುಲರ್ ಪಾರ್ಟಿ' ಟ್ರೇಲರ್ ನೋಡಿದ್ರಾ: ಸಿನಿಮಾ ವೀಕ್ಷಿಸುವ ಕಾತರದಲ್ಲಿ ಸಿನಿಪ್ರಿಯರು
ಹಿರಿಯ ಕಲಾವಿದರನ್ನು ಕರೆಸಿ ನಮ್ಮ ಚಿತ್ರದಲ್ಲಿ ಪಾತ್ರ ಮಾಡಿಸಿದ್ದೇನೆ. ಕನ್ನಡ ಚಿತ್ರರಂಗದ ಬಹುತೇಕ ಹಿರಿಯ, ಹಾಸ್ಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದರಿಂದ ಬರುವ ಲಾಭದಲ್ಲಿ ಶೇ.25ರಷ್ಟು ಹಣವನ್ನು ಬಡ ಕಲಾವಿದರಿಗೆ ಕೊಡಬೇಕು ಎಂದುಕೊಂಡಿದ್ದೇನೆ. ಬೆಂಗಳೂರು, ನೆಲಮಂಗಲ, ಮುರುಡೇಶ್ವರ, ಶಿರಾಲಿ ಹೀಗೆ ಹಲವಾರು ಲೊಕೇಶನ್‌ಗಳಲ್ಲಿ 50 ದಿನಗಳವರೆಗೆ ಚಿತ್ರೀಕರಣ ನಡೆಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: '12th ಫೇಲ್' ಸಿನಿಮಾ ಹೊಗಳಿದ ದೀಪಿಕಾ ಪಡುಕೋಣೆ
ನೃತ್ಯನಿರ್ದೇಶಕ ಅನಿ ಈ ಸಿನಿಮಾದ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ನೈರುತ್ಯ ಆರ್ಟ್ ಮೀಡಿಯಾ ಅಡಿ ನಿರ್ದೇಶಕರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರೊಡ್ಯೂಸರ್ ಬೇಕಾಗಿದ್ದಾರೆ ಎಂಬ ಅಡಿಬರಹ ಇರುವ ಈ ಚಿತ್ರದ 3 ಹಾಡುಗಳಿಗೆ ಇಮ್ತಿಯಾಜ್ ಸುಲ್ತಾನ್ ಸಂಗೀತ ಸಂಯೋಜನೆ ಮಾಡಿದ್ದು, ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಸದ್ಯ ಉಮೇಶ್ ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡಿರುವ ಮತ್ತೆ ಮತ್ತೆ ಸಿನಿಮಾ ಇದೇ ಜನವರಿ 19ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ.