ಮನರಂಜನಾ ಉದ್ಯಮ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಾಣುತ್ತಿದೆ. ಬಣ್ಣದ ಜಗತ್ತಿನಲ್ಲಿ ಹೊಸ ಹೊಸ ಪ್ರಯೋಗಗಳೂ ನಡೆಯುತ್ತಿವೆ. ಇತ್ತೀಚೆಗೆ ಸಿನಿಮಾಗಳಲ್ಲಿ ನಂಬಿಕೆಗೆ ಹೆಸರಾದ ಪ್ರಾಣಿ ಶ್ವಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹ ಸಿನಿಮಾಗಳು ಶ್ವಾನಪ್ರಿಯರನ್ನು ಹೆಚ್ಚಾಗಿ ಸೆಳೆಯುವಲ್ಲಿಯೂ ಯಶಸ್ವಿ ಆಗುತ್ತಿದೆ. ನಿರ್ದೇಶಕರೂ ಕೂಡ ಬಹಳ ಅದ್ಭುತವಾಗಿ ಕಥೆ ರವಾನಿಸಲು ಸಂಪೂರ್ಣ ಶ್ರಮ ಹಾಕುತ್ತಿದ್ದಾರೆ.
ಮಲಯಾಳಂನ ವಾಲಟ್ಟಿ (Valatty: tale of tails) ಚಿತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಚಿತ್ರಮಂದಿರಗಳಲ್ಲಿ ಜುಲೈ 21ರಂದು ತೆರೆಕಂಡ ವಾಲಟ್ಟಿ, ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಶ್ವಾನ ಪ್ರಿಯರನ್ನು ವಿಶೇಷವಾಗಿ ಆಕರ್ಷಿಸಿದೆ. ಈ ಸಿನಿಮಾದಲ್ಲಿ ಶ್ವಾನಗಳು ಪ್ರಮುಖ ಪಾತ್ರ ನಿಭಾಯಿಸಿದ್ದು, ಅವುಗಳು ಸಂಭಾಷಣೆಯನ್ನೂ ನಡೆಸಿವೆ. ನಿರ್ದೇಶಕನ ಚಮತ್ಕಾರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
Valatty: tale of tails: ಕೇರಳ ರಾಜ್ಯದಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಾಗಿವೆ ಎಂಬ ವರದಿಗಳಿವೆ. ಇಂತಹ ಸಂದರ್ಭದಲ್ಲಿ 'ವಾಲಟ್ಟಿ: ಟೇಲ್ ಆಫ್ ಟೇಲ್ಸ್' ಸಿನಿಮಾವನ್ನು ಬಿಡುಗಡೆಗೊಳಿಸಲಾಗಿದೆ. ಶ್ವಾನಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದೇ ಒಂದು ಸವಾಲು. ಅಂತಹದರಲ್ಲಿ ನಿರ್ದೇಶಕ ದೇವನ್ 100ಕ್ಕೂ ಹೆಚ್ಚು ಶ್ವಾನಗಳನ್ನು ಕ್ಯಾಮರಾದೊಳಗೆ ಸೆರೆಹಿಡಿದು ಸಿನಿಮಾ ಮಾಡಿದ್ದಾರೆ. ಆದ್ರೆ ಸಿನಿಮಾದ ಫೈನಲ್ ಕಟ್ನಲ್ಲಿ ಕೆಲ ಶ್ವಾನಗಳು ಮಾತ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿವೆ.
ಜನ ಜಾಗೃತಿಯ ಉದ್ದೇಶ: ಅನೇಕರಿಗೆ ಶ್ವಾನಗಳ ಕುರಿತಾಗಿ ಕೆಟ್ಟ ಅಭಿಪ್ರಾಯವಿದೆ. ಈ ಅಭಿಪ್ರಾಯವನ್ನು ಹೋಗಲಾಡಿಸುವುದೇ ವಾಲಟ್ಟಿ ಸಿನಿಮಾದ ಉದ್ದೇಶ ಎಂದು ಚಿತ್ರತಂಡ ಸಂದರ್ಶನವೊಂದರಲ್ಲಿ ಹೇಳಿಕೊಂಡಿತ್ತು. ಕೆಲವು ಜನರ ಅಭಿಪ್ರಾಯಗಳನ್ನು ಬದಲಾಯಿಸುವ ನಿಟ್ಟಿನಲ್ಲಿ, ಶ್ವಾನಗಳು ತಮ್ಮ ಕಷ್ಟಗಳನ್ನು ಹೇಳುವ ರೀತಿಯಲ್ಲಿ ಸಿನಿಮಾ ಮಾಡಿದ್ದೇವೆಂದು ತಿಳಿಸಿದ್ದರು.
ಸಿನಿಮಾದಲ್ಲಿ ಪಾತ್ರ ವಹಿಸಿರುವ ಶ್ವಾನಗಳು ಬಹಳ ಮುದ್ದಾಗಿವೆ. ತಮ್ಮ ನೋವನ್ನು ಅಚ್ಚುಕಟ್ಟಾಗಿ ಹೇಳಿವೆ ಎಂದು ನಿರ್ದೇಶಕರು ತಿಳಿಸಿದ್ದರು. ರೋಷನ್, ಮ್ಯಾಥ್ಯೂ, ರವೀನಾ ರವಿ, ಸನ್ನಿ ವೇನ್, ಅಜು ವರ್ಗೀಸ್ ಡಬ್ಬಿಂಗ್ನಲ್ಲಿ ಭಾಗಿಯಾಗಿದ್ದರು. ತಯಾರಕರು ಮೂರು ವರ್ಷಗಳ ಹಿಂದೆಯೇ ನಾಯಿ ಮರಿಗಳನ್ನು ಖರೀದಿಸಿ ಅವುಗಳಿಗೆ ತರಬೇತಿ ನೀಡಿದ್ದರು ಎಂಬುದು ಬಹಿರಂಗವಾಗಿದೆ.
ಇದನ್ನೂ ಓದಿ: Pavitra Lokesh: ಪಿಹೆಚ್ಡಿ ಪ್ರವೇಶ ಪರೀಕ್ಷೆ ಪಾಸ್ ಮಾಡಿದ ನಟಿ ಪವಿತ್ರಾ ಲೋಕೇಶ್
ಶ್ವಾನಗಳನ್ನು ಇಟ್ಟುಕೊಂಡು ನಿರ್ಮಿಸುವ ಸಿನಿಮಾಗಳು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುತ್ತವೆ. ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಮೂಡಿ ಬಂದ 777 ಚಾರ್ಲಿ ಇದಕ್ಕೊಂದು ಸ್ಪಷ್ಟ ಉದಾಹರಣೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡ ರಕ್ಷಿತ್ ಶೆಟ್ಟಿ ಅವರ ಚಾರ್ಲಿ ಸಿನಿಮಾ ಸೂಪರ್ ಹಿಟ್ ಆಯಿತು. ತಮಿಳಿನ ಅಪ್ಪತ ಸಿನಿಮಾ ಕೂಡ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಮಲಯಾಳಂನ 'ವಾಲಟ್ಟಿ: ಟೇಲ್ ಆಫ್ ಟೇಲ್ಸ್' ಕೂಡ ಜನಮನ ಸೆಳೆದಿದೆ.
ಇದನ್ನೂ ಓದಿ: Ghoomer Trailer: ಇತಿಮಿತಿ ಮೆಟ್ಟಿ ನಿಂತು ಕ್ರಿಕೆಟ್ ಸಾಧನೆ - ಬಲಗೈ ಇಲ್ಲದಿದ್ದರೇನಂತೆ? ಎಡಗೈಯಲ್ಲೇ ಬೌಲಿಂಗ್!