ಕನ್ನಡ ಚಿತ್ರರಂಗದ ಶೋ ಮ್ಯಾನ್ ಹಾಗೂ ಅಭಿಮಾನಿಗಳ ಪಾಲಿನ ಕನುಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ.
2017ರಲ್ಲಿ ಸಾಹೇಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಬೃಹಸ್ಪತಿ ಅಂತಾ ಕರೆಯಿಸಿಕೊಂಡು, ಮುಗಿಲ್ ಪೇಟೆಯಲ್ಲಿ ಮಿಂಚಿದ ಮನೋರಂಜನ್ ಅಭಿಮಾನಿಗಳ ಮನಸ್ಸು ಕದಿಯುವಲ್ಲಿ ಯಶಸ್ಸಿಯಾಗಿದ್ದರು. ಈಗ ಸಿನಿಮಾ ಜೊತೆ ಜೊತೆಗೆ ಮನೋರಂಜನ್ ಮದುವೆ ಎಂಬ ಬಂಧನಕ್ಕೆ ಒಳಗಾಗಲು ಸಜ್ಜಾಗಿದ್ದಾರೆ.
2019 ರಲ್ಲಿ ಕ್ರೇಜಿಸ್ಟಾರ್ ತಮ್ಮ ಮುದ್ದಿನ ಮಗಳು ಗೀತಾಂಜಲಿ ಮದುವೆಯನ್ನ ತಮ್ಮ ಆಸೆಯಂತೆ ಅದ್ಧೂರಿಯಾಗಿ ಮಾಡಿದ್ರು. ಅದಾದ ನಂತ್ರ ರವಿಮಾಮನ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆದಿರಲಿಲ್ಲ. ಈಗ ಮೂರು ವರ್ಷಗಳ ನಂತ್ರ ಕ್ರೇಜಿ ಸ್ಟಾರ್ ಮನೆಯಲ್ಲಿ ಶುಭಕಾರ್ಯ ನಡೆಯುತ್ತಿದೆ. ಮುಂದಿನ ತಿಂಗಳು ಅಂದ್ರೆ ಆಗಸ್ಟ್ 21, 22 ರಂದು ಮನೋರಂಜನ್ ಅವರು ಸಂಗೀತ ಎಂಬುವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಬೆಂಗಳೂರು ಮೂಲದ ಸಂಗೀತ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ರವಿಚಂದ್ರನ್ ಆಪ್ತರು ಹೇಳುವ ಹಾಗೇ ಇದು ಆರೇಂಜ್ ಮ್ಯಾರೇಜ್ ಆಗಿದ್ದು, ಮನೋರಂಜನ್ ಅಪ್ಪ ನೋಡಿದ ಹುಡುಗಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಈಗಾಗಲೇ ಮದುವೆ ಕೆಲಸಗಳು ಶುರುವಾಗಿವೆ. ಮದುವೆ ಆಮಂತ್ರಣ ಪತ್ರಿಕೆ ಕೊಡೋದ್ರಲ್ಲಿ ರವಿಚಂದ್ರನ್ ಕುಟುಂಬ ಬ್ಯುಸಿಯಾಗಿದೆ.
ಮಗಳು ಗೀತಾಂಜಲಿ ಅವರ ಮದುವೆಯಂತೆ ಮನೋರಂಜನ್ ವಿವಾಹ ಮಾಡಲು ಕ್ರೇಜಿಸ್ಟಾರ್ ನಿರ್ಧರಿಸಿದ್ದು, ಕನ್ನಡ ಚಿತ್ರರಂಗ ಅಲ್ಲದೆ, ತೆಲುಗು, ತಮಿಳು ಚಿತ್ರರಂಗ ಸೇರಿದಂತೆ ಎಲ್ಲಾ ಚಿತ್ರರಂಗದವರಿಗೆ ರವಿಮಾಮ ಆಹ್ವಾನ ನೀಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ತೀರ್ಥಹಳ್ಳಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಆರಗ ಜ್ಞಾನೇಂದ್ರ