ಬಹುಭಾಷಾ ನಟ ಕಿಶೋರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದ್ದಾರೆ. ಮಣಿಪುರದ ಜನಾಂಗೀಯ ಗಲಭೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಘಟನೆಗೆ ಪ್ರಧಾನಿಯವರನ್ನೇ ನೇರ ಹೊಣೆಯಾಗಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗಲಭೆಕೋರರು ಬೆಂಕಿ ಹಚ್ಚಿದ ಫೋಟೋವನ್ನು ಹಂಚಿಕೊಂಡು, 'ಮನ್ ಕೀ ಬಾತ್ನಲ್ಲಿ ಕಳೆದುಹೋದ ಮಣಿಪುರದ ಬಾತ್' ಎಂದು ಮೋದಿಯನ್ನು ಟೀಕಿಸಿದ್ದಾರೆ.
ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೇ 3ರಿಂದ ಪರಿಶಿಷ್ಟ ಪಂಗಡ ಮೀಸಲಾತಿ ವಿವಾದದಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಮೈತಿಯಿ ಸಮುದಾಯ ಹಾಗೂ ಬುಡಕಟ್ಟಿನ ಕುಕಿ ಸಮುದಾಯದ ನಡುವೆ ಸಂಘರ್ಷ ಭುಗಿಲೆದ್ದಿದೆ. ರಾಜ್ಯಾದ್ಯಂತ ಹಿಂಸಾತ್ಮಕ ಘರ್ಷಣೆಗಳು ನಡೆದು ಇದುವರೆಗೆ 120ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಂದಾಜು 3,000 ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ಹಿಂಸಾಚಾರ ಪೀಡಿತ ಸ್ಥಳಗಳಿಂದ ಬೇರೆಡೆಗೆ ತೆರಳಿ ಆಶ್ರಯ ಪಡೆದಿದ್ದಾರೆ.
ಮಣಿಪುರದ ಸಿಎಂ ಬಿರೇನ್ ಸಿಂಗ್ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಅಲ್ಲದೇ, ಬಿರೇನ್ ಸಿಂಗ್ ಸ್ವತಃ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳಿಂದ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದರು. ಬಳಿಕ ಆ ನಿರ್ಧಾರವನ್ನು ಅವರು ಹಿಂಪಡೆದಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮಣಿಪುರಕ್ಕೆ ಆಗಮಿಸಿ, ಪರಿಹಾರ ಶಿಬಿರಗಳಲ್ಲಿ ಜಾತಿ ಹಿಂಸಾಚಾರದಿಂದ ಸ್ಥಳಾಂತರಗೊಂಡ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಆದರೆ ಈ ಬಗ್ಗೆ ಪ್ರಧಾನಿ ಮೋದಿ ಮೌನವಾಹಿಸಿದ್ದಾರೆ ಎಂಬುದು ನಟ ಕಿಶೋರ್ ಆರೋಪ.
ಕಿಶೋರ್ ಹೇಳಿದ್ದೇನು?: "ದೇಶದಲ್ಲಿ ಎಲ್ಲೇ ಅಶಾಂತಿ ಮೂಡಿದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತಿ ಸರಳ, ಕಾಮನ್ ಸೆನ್ಸ್ನ ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನೂ ಕೂಡ ಮಾಡದ ಪ್ರಧಾನಿಯ ಮನಸ್ಥಿತಿಯೇನು? ನೂರ ನಲವತ್ತು ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು, ಈ ಪ್ರಚಾರದಾಹಿ ಅಧಿಕಾರದಾಹಿ ಪ್ರಧಾನಿಗೆ ಯಾವ ಲೆಕ್ಕವೆಂಬುದೇ? 2002ರಲ್ಲಿ ಗುಜರಾತ್ 2023 ರಲ್ಲಿ ಮಣಿಪುರ, ಜೀವಗಳು ಮುಖ್ಯವಲ್ಲ ಓಟುಗಳಷ್ಟೇ ಮುಖ್ಯ. ಇತಿಹಾಸಕ್ಕೆ ಮರೆವಿಲ್ಲ, ನೆನಪಿರಲಿ" ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಮಣಿಪುರಕ್ಕೆ ಸಂಬಂಧಿಸಿ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲೂ ಪ್ರಧಾನಿ ಅವರನ್ನು ಟೀಕಿಸಿಯೇ ಮಾತನಾಡಿದ್ದರು. "ಒಂದು ಕರೆಯಲ್ಲಿ ಯುಕ್ರೇನ್ ಯುದ್ಧ ನಿಲ್ಲಿಸಿದೆವೆಂದು ಬಡಾಯಿ ಕೊಚ್ಚುವ ಜನ, ಮಣಿಪುರವನ್ನು ತಿಂಗಳಿಂದ ಹೊತ್ತಿ ಉರಿಯಲು ಬಿಟ್ಟದ್ದೇಕೆ? ಲಾಭ ಲಾಭ ಲಾಭ, ಎಲ್ಲದರಲ್ಲೂ ಲಾಭ. ಪಾಪದ ಜನರ ಸಾವಿನಲ್ಲೂ ಲಾಭದ ಧಂದೆ ಮಾಡುವ ವ್ಯಾಪಾರಿಯ ಕೈಗೆ ದೇಶ ಕೊಟ್ಟಂತಾಯ್ತು. ಜನ ಸಾಯುತ್ತಲೇ ಇರಲಿ ಗುಜರಾತಿನಲ್ಲೊ, ಪುಲ್ವಾಮದಲ್ಲೊ, ಒಡಿಸ್ಸಾದಲ್ಲೊ, ಮಣಿಪುರದಲ್ಲೊ. ದೇಶದ ಮೂಲೆ ಮೂಲೆಯಲ್ಲಿ ಹಿಂಸೆಯ ರೋಗವನ್ನು ಹರಡಿ ಲಾಭ ಹೆಕ್ಕುತ್ತಲೇ ಇರುತ್ತಾರೆ ದ್ವೇಷದ ವ್ಯಾಪಾರಿಗಳು. ಯಾರೂ ಪ್ರಶ್ನಿಸಬೇಡಿ. ಪತ್ರಿಕೆಯಾದರೂ ಸರಿ, ಟ್ವಿಟರ್‌ನಲ್ಲಾದರೂ ಸರಿ. ತುಮ್ ಬಸ್ ಚುಪ್ ರಹೋ ಯೇ ಉನ್ ಕೀ ಮನ್ ಕೀ ಬಾತ್ ಹೈ" ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: Mann ki Baat : ಮಣಿಪುರ ಹಿಂಸಾಚಾರ ಬಗ್ಗೆ ಪ್ರಧಾನಿ ಮೌನ ಪ್ರಶ್ನಿಸಿದ ಪ್ರತಿಪಕ್ಷಗಳು.. ರೇಡಿಯೋ ಒಡೆದು ಪ್ರತಿಭಟನೆ