ಕೊಚ್ಚಿ (ಕೇರಳ): ಮಲಯಾಳಂ ಚಲನಚಿತ್ರ ನಿರ್ದೇಶಕ ಸಿದ್ದಿಕ್ (63) ಹೃದಯಾಘಾತದಿಂದ ಇಂದು ನಿಧನ ಹೊಂದಿದ್ದಾರೆ. ನ್ಯುಮೋನಿಯಾ ಮತ್ತು ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಸೋಮವಾರ ಮಧ್ಯಾಹ್ನ ಹೃದಯಾಘಾತ ಸಂಭವಿಸಿತ್ತು. ನಂತರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇಂದು ರಾತ್ರಿ 9 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಹೋದ್ಯೋಗಿಗಳಾದ ಬಿ.ಉನ್ನಿಕೃಷ್ಣನ್ ಹಾಗೂ ಲಾಲ್ ನಿಧನದ ಸುದ್ದಿ ಖಚಿತಪಡಿಸಿದ್ದಾರೆ.
ಮಿಮಿಕ್ರಿ ಕಲಾವಿದರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದ ಸಿದ್ದಿಕ್ ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಕೊಚ್ಚಿನ್ ಕಲಾಭವನ ಎಂಬ ಮಿಮಿಕ್ಸ್ ತಂಡದಲ್ಲಿ ಸದಸ್ಯರಾಗಿದ್ದರು. ಇದು ಒಂದು ಕಾಲದಲ್ಲಿ ಕೇರಳದ ಪ್ರಸಿದ್ಧ ಮಿಮಿಕ್ಸ್ ತಂಡವಾಗಿತ್ತು. ನಂತರ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಫಾಸಿಲ್ ಅವರ ಸಹಾಯಕ ನಿರ್ದೇಶಕರಾಗಿ ಮಲಯಾಳಂ ಚಲನಚಿತ್ರಕ್ಕೆ ಪ್ರವೇಶಿಸಿದ್ದರು.
ಇದನ್ನೂ ಓದಿ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ
ಮಿಮಿಕ್ರಿ ಕಲಾವಿದ ಲಾಲ್ ಅವರೊಂದಿಗೆ ಸಿದ್ದಿಕ್ ತಮ್ಮದೇ ಆದ ಚಲನಚಿತ್ರ ಯೋಜನೆಗಳನ್ನು ಹಾಕಿಕೊಳ್ಳಲು ಪ್ರಾರಂಭಿಸಿದ್ದರು. ಚಿತ್ರಕಥೆ ಮತ್ತು ನಿರ್ದೇಶನವನ್ನು ಸಿದ್ದಿಕ್ ಹಾಗೂ ಲಾಲ್ ಒಟ್ಟಿಗೆ ನಿರ್ವಹಿಸಿದ್ದರು. 'ರಾಮ್‌ಜಿ ರಾವ್ ಸ್ಪೀಕಿಂಗ್' ಇವರ ನಿರ್ದೇಶನದ ಚೊಚ್ಚಲ ಚಿತ್ರ. 'ಇನ್ ಹರಿಹರ್ ನಗರ', 'ಗಾಡ್ ಫಾದರ್', 'ವಿಯೆಟ್ನಾಂ ಕಾಲೋನಿ' ಮತ್ತು 'ಕಾಬುಲಿವಾಲಾ' ಮುಂತಾದ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ನಂತರ ತಾವೇ ನಿರ್ದೇಶಕರಾಗಿ ಚಿತ್ರಗಳನ್ನು ನಿರ್ದೇಶನ ಮಾಡಲು ಆರಂಭಿಸಿದ್ದರು. ಇವರ ನಿರ್ದೇಶನದ 'ಬಾಡಿ ಗಾರ್ಡ್' ಸಿನಿಮಾ ಹಿಂದಿ ಮತ್ತು ತಮಿಳು ಎರಡರಲ್ಲೂ ರಿಮೇಕ್ ಆಗಿತ್ತು. 'ಹಿಟ್ಲರ್', 'ಫ್ರೆಂಡ್ಸ್', 'ಕ್ರಾನಿಕ್ ಬ್ಯಾಚುಲರ್', 'ಭಾಸ್ಕರ್ ದಿ ರಾಸ್ಕಲ್' ಹಾಗೂ 'ಫುಕ್ರಿ'ಯಂತಹ ಹಿಟ್ ಚಿತ್ರಗಳನ್ನು ಸಿದ್ದಿಕ್ ನಿರ್ದೇಶಿಸಿದ್ದಾರೆ. 'ಬಿಗ್ ಬ್ರದರ್' ಅವರ ಕೊನೆಯ ವೈಯಕ್ತಿಕ ನಿರ್ದೇಶನದ ಚಿತ್ರವಾಗಿದೆ.
ಇದನ್ನೂ ಓದಿ: William Friedkin: ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಿರ್ದೇಶಕ ವಿಲಿಯಂ ಫ್ರೈಡ್ಕಿನ್ ನಿಧನ