ಕ್ರಿಕೆಟ್ ದಂತಕಥೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 'ಎಲ್ಜಿಎಂ' ಚಿತ್ರದ ಮೂಲಕ ನಿರ್ಮಾಪಕರಾಗಿ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ 'ಲೆಟ್ಸ್ ಗೆಟ್ ಮ್ಯಾರೀಡ್' (ಎಲ್ಜಿಎಂ) ಚಿತ್ರವನ್ನು ತಲೈವಾ ನಿರ್ಮಿಸುತ್ತಿದ್ದಾರೆ. ಮೈದಾನದಲ್ಲಿ ಬ್ಯಾಟ್ ಹಿಡಿದು ಫೋರ್, ಸಿಕ್ಸ್ ಬಾರಿಸುತ್ತಿದ್ದ ನಾಯಕ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ನಟ ಹರೀಶ್ ಕಲ್ಯಾಣ್ ಮತ್ತು ಇವಾನಾ ಅಭಿನಯದ ಎಲ್ಜಿಎಂ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶಿಸುತ್ತಿದ್ದಾರೆ. ನಿನ್ನೆ (ಬುಧವಾರ) ನಿರ್ಮಾಪಕ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್ ಬಹುನಿರೀಕ್ಷಿತ ಸಿನಿಮಾದ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ.
ಎಂಎಸ್ ಧೋನಿ ಟೀಸರ್ ಅನ್ನು ಹಂಚಿಕೊಳ್ಳಲು ಫೇಸ್ಬುಕ್ ವೇದಿಕೆ ಬಳಸಿಕೊಂಡರು. "ಟೀಸರ್ ಅನ್ನು ಬಿಡುಗಡೆ ಮಾಡಲು ನಾನು ಥ್ರಿಲ್ ಆಗಿದ್ದೇನೆ ಮತ್ತು ಹೆಮ್ಮೆ ಪಡುತ್ತೇನೆ. #LGM ಅತೀ ಶೀಘ್ರದಲ್ಲಿ. ತಂಡದಲ್ಲಿರುವ ಎಲ್ಲರಿಗೂ ಒಳ್ಳೆಯದಾಗಲಿ. ಧೋನಿ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಟೆಡ್" ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಇದನ್ನೂ ಓದಿ: ರಾಮ - ಸೀತೆಯಾಗಿ ರಾಲಿಯಾ, ರಾವಣನ ಪಾತ್ರಕ್ಕೆ ಯಶ್: ರಾಮಾಯಣ ಆಧಾರಿತ ಮತ್ತೊಂದು ಚಿತ್ರಕ್ಕೆ ತಯಾರಿ?!
ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಕೂಡ ಎಲ್ಜಿಎಂ ಚಿತ್ರದ ಟೀಸರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಟೀಸರ್ ಬಿಡುಗಡೆಗೊಳಿಸಲು ಥ್ರಿಲ್ ಆಗಿದ್ದೇವೆ. ಎಲ್ಜಿಎಂ ನಿಮಗೆ ಹೃದಯ ತುಂಬಿದ ಮನರಂಜನೆ ನೀಡಲಿದೆ. ಆದಷ್ಟು ಶೀಘ್ರದಲ್ಲೇ ಥಿಯೇಟರ್ನಲ್ಲಿ ಬರಲಿದೆ." ಎಂದು ಶೀರ್ಷಿಕೆ ಬರೆದಿದ್ದಾರೆ. ಸೋನಿ ಮ್ಯೂಸಿಕ್ ಸೌತ್ ಕೂಡ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಎಲ್ಜಿಎಂ ಚಿತ್ರತಂಡ ಹೀಗಿದೆ.. ಇನ್ನೂ ಎಲ್ಜಿಎಂ ಚಿತ್ರಕ್ಕೆ ವಿಶ್ವಜಿತ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಪ್ರದೀಪ್ ರಾಗವ್ ಸಂಕಲನವಿದೆ. ಚಿತ್ರದ ಟೀಸರ್ ಸುಮಾರು ಒಂದು ನಿಮಿಷವಿದ್ದು, ಪ್ರಮುಖ ಪಾತ್ರಗಳನ್ನು ಒಳಗೊಂಡ ಹಲವಾರು ಆಸಕ್ತಿದಾಯಕ ವಿಚಾರಗಳನ್ನು ಒಳಗೊಂಡಿದೆ. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಜೊತೆಗೆ ಹಿರಿಯ ನಟಿ ನದಿಯಾ, ಯೋಗಿ ಬಾಬು, ಆರ್‌ಜೆ ವಿಜಯ್, ವಿಟಿವಿ ಗಣೇಶ್, ದೀಪಾ ಮತ್ತು ವೆಂಕಟ್ ಪ್ರಭು ಕೂಡ ನಟಿಸಿದ್ದಾರೆ.
ಚಿತ್ರದ ಕಥೆಯು ವಿಶಿಷ್ಟವಾಗಿದೆ ಮತ್ತು ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಮನರಂಜನೆ ನೀಡಲಿದೆ ಎಂದು ನಿರ್ದೇಶಕ ರಮೇಶ್ ತಮಿಳ್ಮಣಿ ಈ ಹಿಂದೆ ಹೇಳಿದ್ದರು. ಇನ್ನೂ ನಟ ಹರೀಶ್ ಕಲ್ಯಾಣ್ 2022ರ ಡಿಸೆಂಬರ್ನಲ್ಲಿ ನರ್ಮದಾ ಉದಯಕುಮಾರ್ ಎಂಬುವವರನ್ನು ಮದುವೆಯಾದರು. ಇದೀಗ ಕ್ರಿಕೆಟಿಗ ಎಂಎಸ್ ಧೋನಿ ನಿರ್ಮಾಣದ ಲೆಟ್ಸ್ ಗೆಟ್ ಮ್ಯಾರೀಡ್ ಮೂಲಕ ಮತ್ತೆ ದೊಡ್ಡ ಪರದೆಗೆ ನಟ ಮರಳಿದ್ದಾರೆ. ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಟ್ಟಿರುವ ತಲೈವಾ ಎಷ್ಟರ ಮಟ್ಟಿಗೆ ಸಕ್ಸಸ್ ಕಾಣಲಿದ್ದಾರೆ ಎಂದು ಶೀಘ್ರದಲ್ಲೇ ತಿಳಿಯಲಿದೆ.
ಇದನ್ನೂ ಓದಿ: 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾದಲ್ಲಿ ಮಧ್ಯಮ ವರ್ಗ ಕುಟುಂಬದ ಚಿತ್ರಣ: ವಾರದೊಳಗೆ 35 ಕೋಟಿ ರೂ. ಗಳಿಕೆ!