ಪಹಲ್ಗಾಮ್(ಕಾಶ್ಮೀರ): ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸಿನಿಮಾದ ಸಾಹಸಮಯ ದೃಶ್ಯದ ಚಿತ್ರೀಕರಣ ಮಾಡ್ತಿದ್ದ ವೇಳೆ ಖ್ಯಾತ ನಟನಾದ ವಿಜಯ್ ದೇವರಕೊಂಡ ಹಾಗೂ ನಟಿ ಸಮಂತಾ ರುತ್ ಪ್ರಭು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಇಬ್ಬರು ಪಾರಾಗಿದ್ದು, ಸದ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಜನಪ್ರಿಯ ಪ್ರವಾಸಿ ತಾಣವಾದ ಪಹಲ್ಗಾಮ್ನಲ್ಲಿ ಈ ಚಿತ್ರೀಕರಣ ಆಯೋಜನೆ ಮಾಡಲಾಗಿತ್ತು.
'ಖುಷಿ' ಚಿತ್ರದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ನಟನೆ ಮಾಡ್ತಿದ್ದು, ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ವೇಳೆ ಸಾಹಸ ಮಯ ದೃಶ್ಯದಲ್ಲಿ ಶೂಟ್ ಮಾಡಲಾಗ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಲಿಡ್ಡರ್ ನದಿಯ ಎರಡು ಬದಿಗಳಲ್ಲಿ ಕಟ್ಟಲಾಗಿದ್ದ ಹಗ್ಗದ ಮೇಲೆ ವಾಹನ ರೇಸ್ ಮಾಡಬೇಕಾಯಿತು. ಈ ಕಾರು ನೀರಿನಲ್ಲಿ ಬಿದ್ದಿದ್ದು, ಇಬ್ಬರ ಬೆನ್ನಿಗೂ ಗಾಯಗಳಾಗಿವೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಯಾವುದೇ ರೀತಿಯ ದೊಡ್ಡ ಅವಘಡ ನಡೆದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಚಿತ್ರತಂಡದಿಂದ ಯಾವುದೇ ರೀತಿಯ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಪೃಥ್ವಿ ಅಂಬರ್ - ಮಿಲನಾ ನಾಗರಾಜ್ ಅಭಿನಯದ 'ಫಾರ್ ರಿಜಿಸ್ಟ್ರೇಷನ್'
ಲಭ್ಯವಾಗಿರುವ ಮಾಹಿತಿ ಪ್ರಕಾರ, ಇಬ್ಬರನ್ನ ಹೋಟೆಲ್ವೊಂದಕ್ಕೆ ಸ್ಥಳಾಂತರ ಮಾಡಲಾಗಿದ್ದು, ಫಿಸಿಯೋಥೆರಪಿಸ್ಟ್ ಕರೆಯಿಸಿ, ಚಿಕಿತ್ಸೆ ನೀಡಲಾಗ್ತಿದೆ. ಈ ಚಿತ್ರ ಮುಂಬರುವ ಡಿಸೆಂಬರ್ 23ರಂದು ಬಿಡುಗಡೆಯಾಗಲಿದ್ದು, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದ ಬಹುಪಾಲು ಚಿತ್ರೀಕರಣ ಕಾಶ್ಮೀರದ ಗುಲ್ಮಾರ್ಗ್ ಸೋನಾಮಾರ್ಗ್, ದಾಲ್ ಲೇಕ್ ಮತ್ತು ಪಹಲ್ಗಾಮ್ನಲ್ಲಿ ನಡೆದಿದೆ.
ನಟ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ತಮ್ಮ ವೃತ್ತಿ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದು, ಒಂದರ ನಂತರ ಒಂದರಂತೆ ಚಿತ್ರ ಮಾಡುತ್ತಿದ್ದು, ಸಿನಿಮಾಗಳು ಹಿಟ್ ಆಗುತ್ತಿವೆ. ಇದೀಗ ನಟ ವಿಜಯ್ ದೇವರಕೊಂಡ ಅವರೊಂದಿಗೆ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ.
ಪುಷ್ಪ ಚಿತ್ರದಲ್ಲಿನ 'ಊ ಅಂಟಾವಾ' ಐಟಂ ಸಾಂಗ್ನಲ್ಲಿ ಸೊಂಟ ಬಳುಕಿಸಿ ಮಿಂಚು ಹರಿಸಿದ್ದ ಸಮಂತಾ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಖುಷಿಯಲ್ಲಿ ತೇಲುತ್ತಿದ್ದಾರೆ. ಇದರ ಮಧ್ಯೆ ಈ ಘಟನೆ ಸಂಭವಿಸಿದೆ.