ಕನ್ನಡ ಚಿತ್ರರಂಗದ ಜನಪ್ರಿಯ ಸೆಲೆಬ್ರಿಟಿ ಸಹೋದರರು ಎಂದರೆ ಅದು ನವರಸನಾಯಕ ಜಗ್ಗೇಶ್ ಹಾಗೂ ಕೋಮಲ್ ಕುಮಾರ್. ಹಿರಿಯ ಮತ್ತು ಜನಪ್ರಿಯ ನಟ ಜಗ್ಗೇಶ್ ಚಿತ್ರರಂಗಕ್ಕೆ ಬಂದ ದಿನದಿಂದಲೂ ಅವರ ಚಿತ್ರಗಳಲ್ಲಿ ಸಹೋದರ ಕೋಮಲ್ ಅವರಿಗೆ ಒಂದು ಪಾತ್ರ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಕೋಮಲ್ ಕುಮಾರ್ ಸಿನಿ ಬೆಳವಣಿಗೆಯಲ್ಲಿ ಜಗ್ಗೇಶ್ ಪಾಲು ಹೆಚ್ಚಿದೆ. ಇತ್ತ ಪ್ರೇಕ್ಷಕರನ್ನು ರಂಜಿಸುವಲ್ಲಿ ಕೋಮಲ್ ಸಹ ಯಶ ಕಂಡಿದ್ದಾರೆ.
![Komal and Jaggesh shared screen in Kalaya Namaha movie](https://etvbharatimages.akamaized.net/etvbharat/prod-images/30-08-2023/19390799_saberawegh.jpg)
ಸಹೋದರರ ಸ್ಕ್ರೀನ್ ಶೇರ್: ಇದೀಗ ಅನಸೂಯ ಕೋಮಲ್ ಕುಮಾರ್ ನಿರ್ಮಾಣದ, ಮತಿವಣನ್ ನಿರ್ದೇಶನದ "ಕಾಲಾಯ ನಮಃ" ಚಿತ್ರದಲ್ಲಿ ಜಗ್ಗೇಶ್ ಮತ್ತು ಕೋಮಲ್ ಅಭಿನಯಿಸುತ್ತಿದ್ದಾರೆ. ಬಹಳ ದಿನಗಳ ನಂತರ ಸಹೋದರರು ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಕೆಲ ಸಮಯ ಸಿನಿಮಾಗಳಿಂದ ದೂರವಿದ್ದ ಕೋಮಲ್ ಈ ಕಾಲಾಯ ನಮಃ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ತಮ್ಮ ಮುಖ್ಯಭೂಮಿಕೆಯಲ್ಲಿರುವ ಸಿನಿಮಾದಲ್ಲಿ ಅಣ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಸಹೋದರರ ಸಾಂಗ್ ಶೂಟಿಂಗ್: ಇವರಿಬ್ಬರೂ ಭಾಗವಹಿಸಿರುವ ಹಾಡೊಂದರ ಶೂಟಿಂಗ್ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಡೀ ಕಾಲಾಯ ನಮಃ ಚಿತ್ರತಂಡ ಉಪಸ್ಥಿತವಿತ್ತು. ಸಹೋದರರನ್ನು ಒಂದೇ ಪರದೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ರೆಡಿಯಾಗಿದ್ದಾರೆ.
'ಕೋಮಲ್ ಅದ್ಭುತ ಕಲಾವಿದ'.. ಈ ಬಗ್ಗೆ ಮೊದಲಿಗೆ ಮಾತು ಆರಂಭಿಸಿದ ನಟ ಜಗ್ಗೇಶ್, ''ನಾನು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಕೋಮಲ್ ಅವರು ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಕೋಮಲ್ ಅದ್ಭುತ ಕಲಾವಿದ ಎಂದು ನಾನು, ಈ ಹಿಂದಿನಿಂದಲೂ ಹೇಳುತ್ತಾ ಬರುತ್ತಿದ್ದೇನೆ. ಈ ಸಿನಿಮಾದಲ್ಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಬಣ್ಣ ಹಚ್ಚಿದ್ದೇವೆ. ಇತ್ತೀಚೆಗೆ ಬರುತ್ತಿರುವ ಅನೇಕ ಸಿನಿಮಾಗಳು ಯಶಸ್ವಿ ಆಗುತ್ತಿವೆ. ಕಾಲಾಯ ನಮಃ ಸಹ ಪ್ರಚಂಡ ಯಶಸ್ಸು ಕಾಣಲಿ'' ಎಂದು ಶುಭ ಹಾರೈಸಿದರು.
ಇದನ್ನೂ ಓದಿ: ಫೋಟೋಗಳಲ್ಲಿ ಬಣ್ಣದ ಲೋಕದ ಬೆಡಗಿಯರ ಬಿನ್ನಾಣ.. ಅಭಿಮಾನಿಗಳಿಂದ ಗುಣಗಾನ
ಚಿತ್ರೀಕರಣ ಬಹುತೇಕ ಪೂರ್ಣ: ಇದು ನಮ್ಮ ಸಂಸ್ಥೆಯ ಚಿತ್ರ, ನನ್ನ ಹೆಂಡತಿ ಅನಸೂಯ ಅವರು ನಿರ್ಮಾಪಕರು ಎಂದು ಮಾತು ಆರಂಭಿಸಿದ ನಟ ಕೋಮಲ್ ಕುಮಾರ್, ''ಕಾಲಾಯ ನಮಃ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ಸದ್ಯ ಹಾಡೊಂದರ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿನ ಶೂಟಿಂಗ್ನಲ್ಲಿ ನಮ್ಮ ಅಣ್ಣ ಜಗ್ಗೇಶ್, ನಾನು ಹಾಗೂ ಮುಂಬೈನ ನಟಿಯೊಬ್ಬರು ಪಾಲ್ಗೊಂಡಿದ್ದೇವೆ. ಯೋಗರಾಜ್ ಭಟ್ ಈ ಹಾಡನ್ನು ಬರೆದಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣವಿದೆ. ನಾಯಕಿಯಾಗಿ ಆಸಿಯಾ ಫಿರ್ದೋಸ್ ನಟಿಸಿದ್ದಾರೆ. ಜಗ್ಗೇಶ್, ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ಶೈನ್ ಶೆಟ್ಟಿ, ಯತಿರಾಜ್ ಸೇರಿದಂತೆ ಹಲವರು ನಮ್ಮ ಚಿತ್ರದ ತಾರಾಬಳಗದಲ್ಲಿದ್ದಾರೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Raksha Bandhan: ಮನಮೋಹಕವಾಗಿ ರೆಡಿಯಾಗಬೇಕೆ? ಈ ನಟಿಮಣಿಯರ ಸ್ಟೈಲ್ ಟ್ರೈ ಮಾಡಿ ನೋಡಿ
ನಿರ್ದೇಶಕ ಮತಿವಣನ್ ಮಾತನಾಡಿ, 'ಕಾಲಾಯ ನಮಃ' ಸಮಯದ ಸುತ್ತ ನಡೆಯುವ ಕಥೆ ಆಗಿದೆ. ಜಗ್ಗೇಶ್, ಕೋಮಲ್ ಸೇರಿದಂತೆ ಎಲ್ಲ ಕಲಾವಿದರು ಬಹಳ ಚೆನ್ನಾಗಿ ನಟಿಸಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ಕೇಳಿಕೊಂಡರು. ಎಲ್ಲ ಅಂದುಕೊಂಡ ನಡೆದರೆ ಇದೇ ಸಾಲಿನ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ 'ಕಾಲಾಯ ನಮಃ' ಚಿತ್ರ ತೆರೆಗಪ್ಪಳಿಸಲಿದೆ.