ಈ ಸಿನಿಮಾ ಎಂಬ ಬಣ್ಣದ ಜಗತ್ತಿಗೆ ಸ್ಟಾರ್ ಹೀರೋ ಅಥವಾ ಹೀರೋಯಿನ್ ಆಗಬೇಕೆಂಬ ಕನಸಿನೊಂದಿಗೆ ಸಾಕಷ್ಟು ಪ್ರತಿಭೆಗಳು ಎಂಟ್ರಿ ಕೊಡುತ್ತಿರುತ್ತಾರೆ. ಆದ್ರೆ ಆ ಪೈಕಿ ಕೆಲವರು ಮಾತ್ರ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರುತ್ತಾರೆ. ಕೆಲವರು ಸ್ಟಾರ್ ಆಗಿ ಮೆರೆಯುತ್ತಾರೆ. ಇನ್ನೂ ಕೆಲವರು ಒಂದೆರಡು ಸಿನಿಮಾ ಮಾಡಿ ಸುಮ್ಮನಾಗುತ್ತಾರೆ. ಇದೀಗ 'ಕೆರೆಬೇಟೆ' ಸಿನಿಮಾ ಮೂಲಕ ಮೌಂಟ್ ಕಾರ್ಮೆಲ್ ಕಾಲೇಜಿನ ಬೆಡಗಿ ನಟಿಯಾಗುವ ಕನಸು ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
'ಕೆರೆಬೇಟೆ' ಚಿತ್ರ ತನ್ನ ಶೀರ್ಷಿಕೆ, ಫಸ್ಟ್ ಲುಕ್ನಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿದೆ. ಗೌರಿ ಶಂಕರ್ ನಟನೆಯ ಸಿನಿಮಾವನ್ನು ರಾಜ್ ಗುರು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗೆ ನಾಯಕಿಯಾಗಿ ಬಿಂದು ಅವರು ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಮೋಶನ್ ಪೋಸ್ಟರ್ ಮೂಲಕ ಸದ್ದು ಮಾಡಿರುವ 'ಕೆರೆಬೇಟೆ' ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಸದ್ಯ ಚಿತ್ರತಂಡ ನಾಯಕಿ ಬಿಂದು ಅವರ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಅಂದ ಹಾಗೆ ಬಿಂದು ಅವರಿಗೆ ಇದು ಮೊದಲ ಸಿನಿಮಾ. ಕನ್ನಡದವರೇ ಆಗಿರುವ ಬಿಂದು ಈ ಸಿನಿಮಾ ಮೂಲಕ ಹಳ್ಳಿ ಹುಡುಗಿಯಾಗಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಸಿನಿಮಾದಲ್ಲೇ ವಿಭಿನ್ನ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದಿರುವ ಬಿಂದು ಅವರು ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ.
ಬೆಂಗಳೂರು ಮೂಲದ ನಟಿ ಬಿಂದು ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಸಿನಿಮಾದಲ್ಲಿ ನಟಿಸಬೇಕೆನ್ನುವುದು ಬಿಂದು ಅವರ ದೊಡ್ಡ ಕನಸಾಗಿತ್ತು. ಆ ಕನಸು ಈಗ 'ಕೆರೆಬೇಟೆ' ಸಿನಿಮಾ ಮೂಲಕ ನನಸಾಗುತ್ತಿದೆ.
ಇದನ್ನೂ ಓದಿ: ಡ್ಯಾನ್ಸ್ ಮಾಡುತ್ತಿದ್ದಂತೆ ವೇದಿಕೆಯಲ್ಲೇ ಬಿದ್ದ ನಟ ಶಾಹಿದ್ ಕಪೂರ್: ವಿಡಿಯೋ ವೈರಲ್!
ಈ ಬಗ್ಗೆ ಮಾತನಾಡಿರುವ ನಟಿ ಬಿಂದು, ''ಕಾಲೇಜು ದಿನಗಳಲ್ಲಿ ಫ್ಯಾಷನ್ ವಾಕ್, ಕಲ್ಚರಲ್ ಆ್ಯಕ್ಟಿವಿಟಿ ಮತ್ತು ಡ್ರಾಮಾಗಳಲ್ಲಿ ಭಾಗಿಯಾಗುತ್ತಿದ್ದೆ. ಆಗ ನಮ್ಮ ಕಾಲೇಜ್ ಲೆಕ್ಚರರ್ಸ್ ನನ್ನ ಅಭಿನಯ ನೋಡಿ ಅಪ್ರಿಶಿಯೇಟ್ ಮಾಡುತ್ತಿದ್ದರು. ಆ ದಿನಗಲ್ಲಿ ನನಗೆ ಸಿನಿಮಾ ಬಗ್ಗೆ ಒಲವು ಮೂಡಿತ್ತು. ಕೆಲ ಸಿನಿಮಾಗಳ ಆಡಿಶನ್ಗೆ ಹೋಗಿದ್ದೇನೆ. ಅದೇ ರೀತಿ ಕೆರೆಬೇಟೆ ಸಿನಿಮಾಗೂ ಆಡಿಷನ್ ಕೊಟ್ಟಿದ್ದೆ. ಕೆಲ ದಿನಗಳ ನಂತರ, ಪ್ರೊಡಕ್ಷನ್ ಕಡೆಯಿಂದ ಕರೆ ಬಂತು. ನಾಯಕಿ ಪಾತ್ರಕ್ಕೆ ಆಯ್ಕೆ ಆಗಿರುವುದಾಗಿ ತಿಳಿಸಿದರು. ಬಳಿಕ ಅವರೇ ನಿನಾಸಮ್ ತರಬೇತುದಾರರಿಂದ ಅಭಿನಯ ತರಬೇತಿ ಕೊಡಿಸಿದರು. ಈ ಅವಕಾಶ ಕೊಟ್ಟ ಕೆರೆಬೇಟೆ ಚಿತ್ರ ತಂಡಕ್ಕೆ ಕೃತಜ್ಞಳಾಗಿದ್ದೇನೆ'' ಎಂದು ತಿಳಿಸಿದರು. ಸ್ಯಾಂಡಲ್ವುಡ್ನಲ್ಲಿ ದೊಡ್ಡ ನಟಿಯಾಗಿ ಬೆಳೆಯುವ ಕನಸು ಕಂಡಿರುವ ಬಿಂದು ಕೆರೆಬೇಟೆ ಸಿನಿಮಾ ಮೂಲಕ ಅಭಿಮಾನಿಗಳ ಹೃದಯ ಗೆಲ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸಾಂಪ್ರದಾಯಿಕ ಕೆಂಪುಡುಗೆಯಲ್ಲಿ ಕೆಂಗುಲಾಬಿಯಂತೆ ಕಂಗೊಳಿಸಿದ ಕಾಜಲ್ ಅಗರ್ವಾಲ್