ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರದ ಓಟ ಸಾಗುತ್ತಿದೆ. ದಿನ ಕಳೆದಂತೆ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿರುವ ಚಿತ್ರ ಕಲೆಕ್ಷನ್ ವಿಚಾರದಲ್ಲಿಯೂ ಹೊಸ ಅಧ್ಯಾಯ ಬರೆಯುತ್ತಿದೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲದೇ ಪಕ್ಕದ ತೆಲುಗು ರಾಜ್ಯದಲ್ಲಿಯೂ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ತೆರೆಕಂಡ 3ನೇ ವಾರದಲ್ಲಿ ಚಿತ್ರದ ಥಿಯೇಟರ್ಗಳ ಸಂಖ್ಯೆಯೂ ದುಪ್ಪಟ್ಟಾಗಿದೆ.
ಮೊದಲ ವಾರದಲ್ಲಿ 300 ಚಿತ್ರಮಂದಿರಗಳಲ್ಲಿ (ತೆಲುಗು) ಬಿಡುಗಡೆಯಾಗಿದ್ದ ಕಾಂತಾರ, ಅಲ್ಲಿಯ ಕೆಲವು ಸಿನಿಮಾಗಳ ಪೈಪೋಟಿಯಿಂದಾಗಿ ಆ ಸಂಖ್ಯೆ 250ಕ್ಕೆ ಇಳಿದಿತ್ತು. ಇನ್ನೇನು ಚಿತ್ರದ ಕ್ರೇಜ್ ಕಡಿಮೆ ಆಯಿತು ಎನ್ನುವಷ್ಟರಲ್ಲಿ ಮತ್ತೆ ಆ ಸಂಖ್ಯೆ ವೃದ್ಧಿಸಿದೆ. ಟಾಲಿವುಡ್ನಲ್ಲಿ ತೆರೆಕಂಡ ನಾಲ್ಕು ಚಿತ್ರಗಳು ಅಲ್ಲಿಯ ಪ್ರೇಕ್ಷಕರ ಮನಸೂರೆಗೊಳ್ಳಲು ಸೋತಿವೆ. ಇದರ ಪರಿಣಾಮ ಅವರ ಕಣ್ಣೀಗ ಕಾಂತಾರದ ಮೇಲೆ ಬಿದ್ದಿದ್ದು ಚಿತ್ರಮಂದಿರಗಳ ಸಂಖ್ಯೆ 550ಕ್ಕೇರಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ತೆಲುಗು ರಾಜ್ಯಗಳಲ್ಲಿ ಬಿಡುಗಡೆಯಾದ ಕೇವಲ 13 ದಿನಗಳಲ್ಲಿ 45 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದು ಅಲ್ಲಿಯ ಹಂಚಿಕೆದಾರರಿಗೆ ಹತ್ತು ಪಟ್ಟು ಹೆಚ್ಚು ಲಾಭ ತಂದುಕೊಟ್ಟಿದೆಯಂತೆ. ಕೇವಲ 2 ಕೋಟಿ ರೂ ಪ್ರೀ-ರಿಲೀಸ್ ವ್ಯವಹಾರದೊಂದಿಗೆ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು.
ದೇಶ-ವಿದೇಶಗಳಲ್ಲಿ ಹೊಸ ಅಲೆ ಎಬ್ಬಿಸಿರುವ ಕಾಂತಾರ ವಿಶ್ವಾದ್ಯಂತ 250 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರವೇ 200 ಕೋಟಿ ರೂ. ಸನಿಹಕ್ಕೆ ಬಂದಿದೆ. ಬಿಡುಗಡೆಯಾದ ನಾಲ್ಕನೇ ವಾರಾಂತ್ಯದಲ್ಲಿ 14 ಕೋಟಿ ರೂಪಾಯಿಗಳನ್ನು ಗಳಿಸಿದ್ದು 'ಕೆಜಿಎಫ್ 2' ಕಲೆಕ್ಷನ್ಗೆ ಹೋಲಿಸಿದರೆ ಇದು ದುಪ್ಪಟ್ಟು ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ಮಕ್ಕಳಲ್ಲಿಯೂ ಕಾಂತಾರ ಕ್ರೇಜ್: ಪಂಜುರ್ಲಿ ವೇಷದಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ