ನಟ ಅದಿವಿ ಶೇಶ್ ಅಭಿನಯದ 'ಹಿಟ್: ದಿ ಸೆಕೆಂಡ್ ಕೇಸ್' ('HIT: The Second Case') ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣವನ್ನು ನೆನಪಿಸುತ್ತದೆ.
'ಮೇಜರ್' ಖ್ಯಾತಿಯ ಅದಿವಿ ಶೇಶ್ ಅವರ ಮುಂಬರುವ ಚಲನಚಿತ್ರವು ಅದೇ ಅಪರಾಧ ಚಿತ್ರಿಸುತ್ತದೆ. ಒಂದು ವರ್ಷದ ಹಿಂದೆ ಬರೆದ ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಕಳೆದ ವಾರ ನಿಜ ಜೀವನದ ದುರಂತ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಕಾಕತಾಳೀಯ ಎನ್ನುವಂತಿದೆ.
ಸಂಜನಾ ಎನ್ನುವ ಯುವತಿಯ ಕೊಲೆ ಪ್ರಕರಣ ಬಗ್ಗೆ ತನಿಖೆ ನಡೆಸುವ ಕಥಾಹಂದರವುಳ್ಳ ಈ ಚಿತ್ರ 'ಹಿಟ್: ದಿ ಫಸ್ಟ್ ಕೇಸ್' ಸಿನಿಮಾದ ಮುಂದುವರಿದ ಭಾಗ. ನಿರ್ದೇಶಕ ಸೈಲೇಶ್ ಕೋಲನು ನಿರ್ದೇಶನದ ಚಿತ್ರವು 2022ರ ಡಿಸೆಂಬರ್ 2ರಂದು ತೆರೆಗೆ ಬರಲು ಸಿದ್ಧವಾಗಿದೆ. ಬಿಡುಗಡೆಯ ದಿನಾಂಕ ಘೋಷಿಸಿದ ಬೆನ್ನಲ್ಲೇ ಚಿತ್ರ ತಯಾರಕರು ರೋಮಾಂಚಕ ಟ್ರೈಲರ್ ಬಿಡುಗಡೆ ಮಾಡಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ಟ್ರೈಲರ್ ಹೀಗಿರುವಾಗ ಇನ್ನೂ ಸಿನಿಮಾ ಹೇಗಿರಬಹುದು ಎಂದು ಸಿನಿಪ್ರಿಯರು ಅಂದಾಜಿಸುತ್ತಿದ್ದಾರೆ.
- " class="align-text-top noRightClick twitterSection" data="">
ಜನರನ್ನು ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವ ಕೂಲ್ ಪೊಲೀಸ್ ಕೃಷ್ಣ ದೇವ್ (ಕೆಡಿ) ಅವರ ಸುತ್ತ ಕಥೆ ಹೆಣೆಯಲಾಗಿದೆ. ಕೃಷ್ಣ ದೇವ್ ಅಪರಾಧಿಗಳನ್ನು ಹಿಡಿಯುವುದು ದೊಡ್ಡ ಕೆಲಸವಲ್ಲ, ಅವರು ಬುದ್ಧಿವಂತರಲ್ಲ ಎಂದು ಅಪಹಾಸ್ಯ ಮಾಡುತ್ತಾರೆ. ಆದರೆ, ಕೃಷ್ಣ ದೇವ್ ಕೈಗೊಳ್ಳುವ ತನಿಖೆಯಲ್ಲಿ ಅನೇಕ ತಿರುವುಗಳು ಎದುರಾಗುತ್ತದೆ.
ಕೃಷ್ಣ ದೇವ್ ಅವರ ಜೀವನ, ಪ್ರೀತಿ, ಉದ್ಯೋಗ ಎಲ್ಲವೂ ಈ ಕಥೆಯಲ್ಲಿದೆ. ಕೆಡಿ ಪ್ರಕರಣವನ್ನು ಪರಿಹರಿಸಲು ಸಾಧ್ಯವಾಗುತ್ತದೆಯೇ? ಈ ಘೋರ ಅಪರಾಧದ ನಿಜವಾದ ಅಪರಾಧಿಯನ್ನು ಪತ್ತೆಹಚ್ಚಲು ಅವರಿಗೆ ಸಾಧ್ಯವಾಗುತ್ತದೆಯೇ? ಎಂಬ ಕುತೂಹಲವನ್ನು ಈ ಟ್ರೈಲರ್ ಮೂಡಿಸಿದೆ.
ಇದನ್ನೂ ಓದಿ: ಕೋಪದಲ್ಲಿ ಕತ್ತು ಹಿಸುಕಿ ಕೊಂದು 35 ಪೀಸ್ ಮಾಡಿದೆ: ಕೋರ್ಟ್ಗೆ ತಿಳಿಸಿದ ಶ್ರದ್ಧಾ ಹಂತಕ ಅಫ್ತಾಬ್
'ಮೇಜರ್' ಚಿತ್ರದ ಮೂಲಕ ನಟ ಅದಿವಿ ಶೇಶ್ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತು. ಈ ಚಲನಚಿತ್ರವು 53ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ಹಿಂದಿ ಭಾಷೆಯ ಚಲನಚಿತ್ರವಾಗಿ ಆಯ್ಕೆಯಾಗಿದೆ. ಡಿಸೆಂಬರ್ 2ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಇದನ್ನೂ ಓದಿ: ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ: ಸಿನಿಮಾ ನಿರ್ಮಾಣ ಘೋಷಿಸಿದ ನಿರ್ದೇಶಕ ಮನೀಶ್ ಸಿಂಗ್
ಚಿತ್ರದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿದ್ದು, ರಾವ್ ರಮೇಶ್, ಶ್ರೀಕಾಂತ್ ಮಾಗಂಟಿ, ಕೋಮಲಿ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಶಾಂತಿ ತಿಪಿರ್ನೇನಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ವಾಲ್ ಪೋಸ್ಟರ್ ಸಿನಿಮಾ ಅಡಿ ನಾನಿ ಈ ಚಿತ್ರವನ್ನು ಪ್ರಸ್ತುತ ಪಡಿಸಲಿದ್ದಾರೆ.
ಶ್ರದ್ಧಾ ವಾಲ್ಕರ್ ಭೀಕರ ಹತ್ಯೆ: ದೇಶವನ್ನೇ ಬೆಚ್ಚಿಬೀಳಿಸಿರುವ ಶ್ರದ್ಧಾ ವಾಲ್ಕರ್ಳ ಭೀಕರ ಹತ್ಯೆ ಕೋಪದಲ್ಲಾದ ಘಟನೆಯಾಗಿದೆ. ವಾಗ್ವಾದದ ವೇಳೆ ಆಕೆಯ ಕುತ್ತಿಗೆ ಹಿಸುಕಿ ಕೊಂದೆ. ಬಳಿಕ ಮೃತದೇಹವನ್ನು 35 ತುಂಡು ಮಾಡಿದೆ ಎಂದು ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ನಿನ್ನೆ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಈ ಚಿತ್ರ ಕೂಡ ಕೊಲೆ ಪ್ರಕರಣದ ಸುತ್ತ ಸುತ್ತುತ್ತದೆ. ಕೊಲೆಯಾದವರ ಮೃತದೇಹ ಕೇವಲ ಓರ್ವರದ್ದಲ್ಲ, ಹಲವರ ಅಂಗಾಗದಿಂದ ಜೋಡಣೆಯಾಗಿದೆ ಎಂಬುದು ತನಿಖೆಯಲ್ಲಿ ತಿಳಿಯುತ್ತದೆ. ನಂತರ ಆ ಪ್ರಕರಣ ಬೇಧಿಸುವುದು ಇನ್ನೂ ಕಷ್ಟಕರವಾಗುತ್ತದೆ.