ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸಿನಿ ಕ್ಷೇತ್ರದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ರೀತಿ ಯುವ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಇಡೀ ಭಾರತೀಯ ಚಿತ್ರರಂಗಕ್ಕೆ ಬರಸಿಡಿಲು ಬಡಿಯುವಂತೆ ಮಾಡಿವೆ. ಚಿಕ್ಕ ಪ್ರಾಯದಲ್ಲೇ ಈ ರೀತಿ ಸಾವನ್ನಪ್ಪುತ್ತಿರುವ ಪ್ರಕರಣಕ್ಕೆ ಇದೀಗ ಹಿಂದಿ ಮತ್ತು ತಮಿಳು ಧಾರಾವಾಹಿ ನಟ ಪವನ್ ಸಿಂಗ್ ಕೂಡ ಸೇರಿದ್ದಾರೆ.
ಕಿರುತೆರೆ ನಟ ಪವನ್ ಸಿಂಗ್ ಅವರು ಹೃದಯಾಘಾತದಿಂದ ಆಗಸ್ಟ್ 18 ರಂದು ನಿಧನರಾದರು. ಅವರಿಗೆ 25 ವರ್ಷ ವಯಸ್ಸಾಗಿತ್ತು. ಇವರು ಮೂಲತಃ ಮಂಡ್ಯ ಜಿಲ್ಲೆಯವರು. ಆದರೆ, ನಟನೆಯ ನಿಮಿತ್ತ ಮುಂಬೈನಲ್ಲಿ ವಾಸವಾಗಿದ್ದರು. ವರದಿಗಳ ಪ್ರಕಾರ, ಪವನ್ ಸಿಂಗ್ ಮೃತದೇಹವನ್ನು ಮುಂಬೈನಿಂದ ಮಂಡ್ಯದಲ್ಲಿನ ಅವರ ನಿವಾಸಕ್ಕೆ ತರಲಾಗಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಅಂತಿಮ ವಿಧಿ - ವಿಧಾನಗಳು ನೆರವೇರಿದೆ. ಪವನ್ ಸಿಂಗ್ ಅವರು ಹಿಂದಿ ಮತ್ತು ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದರು.
ಇದನ್ನೂ ಓದಿ: Heart attack protein: ಹೃದಯಾಘಾತದ ಪ್ರೋಟಿನ್ ಎಂದರೇನು? ಪ್ರಾಣಾಪಾಯ ಹೇಗೆ?
ಕೆಲವು ದಿನಗಳ ಹಿಂದೆ ಆಗಸ್ಟ್ 6 ರಂದು ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾರವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬ್ಯಾಕಾಂಕ್ಗೆ ಸಂಬಂಧಿಕರೊಂದಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿತ್ತು. 41 ವರ್ಷದ ಇವರ ಸಾವು ಇಂದಿನ ದಿನದಲ್ಲಿ ಯುವ ಜನತೆಯಲ್ಲಿ ಹೃದಯಾಘಾತದ ಪ್ರಕರಣ ಹೆಚ್ಚಾಗುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ.
ಅದಕ್ಕೂ ಮೊದಲು ಚಿತ್ರರಂಗಕ್ಕೆ ಮಾತ್ರವಲ್ಲದೇ, ಇಡೀ ದೇಶಕ್ಕೆ ದೊಡ್ಡ ಆಘಾತ ತಂದ ಸಾವಿನ ಸುದ್ದಿ ಎಂದರೆ ಅದು ಪುನೀತ್ ರಾಜ್ಕುಮಾರ್ ಸಾವು. ಜಿಮ್, ವರ್ಕೌಟ್ ಮಾಡಿ ಸದಾ ನಗುತ್ತಾ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿದ್ದ ಅಪ್ಪು ಹೃದಯಾಘಾತದಿಂದ 2021ರ ಅಕ್ಟೋಬರ್ನಲ್ಲಿ ಕೊನೆಯುಸಿರೆಳೆದರು. 46 ವರ್ಷದ ಪುನೀತ್ ಸಾವಿಗೆ ಗಡಿ, ದೇಶ ಮೀರಿ ಜನರು ಕಂಬನಿ ಮಿಡಿದಿದ್ದರು. ಇನ್ನೂ ಕೋವಿಡ್ ಸಮಯದಲ್ಲಿ ಅಂದರೆ 2020ರ ಜೂನ್ ತಿಂಗಳಲ್ಲಿ ದಿಢೀರ್ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದರು.
ಇಷ್ಟೇ ಅಲ್ಲದೇ ಹಿಂದಿ ಬಿಗ್ ಬಾಸ್ 13ನೇ ಸೀಸನ್ ವಿಜೇತ, ಬಾಲಿಕ ವಧು ಧಾರಾವಾಹಿ ಖ್ಯಾತಿಯ ನಟ ಸಿದ್ದಾರ್ಥ್ ಶುಕ್ಲಾ, ಟಿವಿ ಶೋ ಲಪಟಗಂಜ್ ಕಾರ್ಯಕ್ರಮದ ಮೂಲಕ ಹೆಸರಾಗಿದ್ದ ನಟ ಅರವಿಂದ್ ಕುಮಾರ್, ತೆಲುಗಿನ ಖ್ಯಾತ ನಟ ತರಣ್ ಭಾಸ್ಕರ್, ನಟ ನಿತಿನ್ ಗೋಪಿ ಇವರೆಲ್ಲರೂ ಕೂಡ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
16 ವರ್ಷದ ಬಾಲಕಿಗೆ ಹೃದಯಾಘಾತ: ಇತ್ತೀಚೆಗೆ 16 ವರ್ಷದ ಪುಟ್ಟ ಬಾಲಕಿ ಹೃದಯಾಘಾತಕ್ಕೆ ಬಲಿಯಾದ ಆಘಾತಕಾರಿ ಘಟನೆ ತೆಲಂಗಾಣದ ಕರೀನಂಗರ ಜಿಲ್ಲೆಯಲ್ಲಿ ವರದಿಯಾಗಿತ್ತು. ಸರ್ಕಾರಿ ಕಾಲೇಜ್ವೊಂದರಲ್ಲಿ ಆಯೋಜಿಸಿದ್ದ ಒಂದು ಸಣ್ಣ ಕಾರ್ಯಕ್ರಮದಲ್ಲಿ ಬಾಲಕಿ ಡ್ಯಾನ್ಸ್ ಮಾಡುತ್ತಿರುವುದಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಳು. ಇದು ಇತ್ತೀಚೆಗಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಪ್ರಕರಣಕ್ಕೆ ಮತ್ತೊಂದು ಉದಾಹರಣೆ.
ಇದನ್ನೂ ಓದಿ: ರಾಮನಗರ: ಹೃದಯಾಘಾತವಾಗಿ ಕೋರ್ಟ್ ಅಟೆಂಡರ್ ಸಾವು