ಈ ವರ್ಷ 'ಪಠಾಣ್' ಮತ್ತು 'ಜವಾನ್' ಮೂಲಕ ಎರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್, 'ಡಂಕಿ' ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕ್ರಿಸ್ಮಸ್ ಉಡುಗೊರೆಯಾಗಿ ಇಂದು ತೆರೆ ಕಂಡಿರುವ ಈ ಚಿತ್ರ ಪಾಸಿಟಿವ್ ಟಾಕ್ ಗಿಟ್ಟಿಸಿಕೊಂಡು ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿ ಓಡುತ್ತಿದೆ. ರಾಜ್‌ಕುಮಾರ್ ಹಿರಾನಿ ಅವರ ಮಾರ್ಕ್ ಡೈರೆಕ್ಷನ್ ಸಿನಿ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಇದರೊಂದಿಗೆ ಪ್ರೇಕ್ಷಕರು ಈ ಸಿನಿಮಾ ನೋಡಲು ಆಸಕ್ತಿ ತೋರುತ್ತಿದ್ದಾರೆ.
ಮತ್ತೊಂದೆಡೆ, ಚಿತ್ರ ನಿರ್ಮಾಪಕರು 'ಡಂಕಿ'ಯನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಈ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಪ್ರಮುಖ ಒಟಿಟಿ ಪ್ಲಾಟ್ಫಾರ್ಮ್ ಜಿಯೋ ಸಿನಿಮಾಸ್ 155 ಕೋಟಿ ರೂಪಾಯಿ ಬೆಲೆಗೆ ಖರೀದಿಸಿದೆ ಎಂದು ವರದಿಯಾಗಿದೆ. ಬಹುಶಃ ಈ ಸಿನಿಮಾ ಮುಂದಿನ ಸಂಕ್ರಾಂತಿ ಅಥವಾ ಗಣರಾಜ್ಯೋತ್ಸವದ ಉಡುಗೊರೆಯಾಗಿ ಸದ್ಯದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯಂತೆ. ತೆರೆ ಕಂಡ 25 ದಿನಗಳಲ್ಲಿ ಸಿನಿಮಾ ಒಟಿಟಿಯಲ್ಲಿ ಸದ್ದು ಮಾಡಲಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
'ಡಂಕಿ'ಗೆ ಉತ್ತಮ ರೆಸ್ಪಾನ್ಸ್: ಭಾರತದಲ್ಲಿ 'ಡಂಕಿ' ಸರಿಸುಮಾರು 4,000 ಚಿತ್ರಮಂದಿಗಳಲ್ಲಿ ಇಂದು ಬಿಡುಗಡೆಯಾಗಿದ್ದು, ಮೊದಲ ದಿನವೇ 15,000 ಪ್ರದರ್ಶನಗಳು ಕಂಡಿವೆ. ಆರಂಭದ ದಿನವೇ 'ಡಂಕಿ' ನಿರೀಕ್ಷೆಗೂ ಮೀರಿ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. PK ಸಿನಿಮಾ ಆರಂಭಿಕ ದಿನದಲ್ಲಿ 26 ಕೋಟಿ ರೂ. ಗಳಿಸಿತ್ತು. 'ಡಂಕಿ' ಚಿತ್ರದ ಕಲೆಕ್ಷನ್ ದಾಖಲೆಯನ್ನು ಮುರಿಯಲಿದ್ದು, ಮೊದಲ ದಿನವೇ 34.25 ಕೋಟಿ ರೂ. ಹೆಚ್ಚು ಗಳಿಕೆ ಮಾಡಲಿದೆ ಎಂದು ಅಂದಾಜು ಮಾಡಲಾಗಿದೆ.
ರಾಜ್‌ಕುಮಾರ್ ಹಿರಾನಿ ಮತ್ತು ಶಾರುಖ್ ಖಾನ್ ಜೋಡಿಯ ಈ ಚಿತ್ರವು ತಮ್ಮ ತಾಯ್ನಾಡಾದ ಭಾರತಕ್ಕೆ ಮರಳಲು ಬಯಸುವ ಜನರ ಗುಂಪಿನ ಕುರಿತಾಗಿದೆ. ಜಿಯೋಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಿಂದ ಡಂಕಿ ಸಿನಿಮಾ ನಿರ್ಮಾಣಗೊಂಡಿದೆ. ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿ ಅವರಂತಹ ಸ್ಟಾರ್ ನಟರೂ ಕೂಡ ಇದ್ದಾರೆ.
ಶಾರುಖ್ ಸಿನಿಮಾಗೆ 'ಸಲಾರ್' ಪೈಪೋಟಿ: 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕಾಂಬೋದ 'ಸಲಾರ್' ಸಿನಿಮಾ ನಾಳೆ ತೆರೆ ಕಾಣಲಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ನಲ್ಲಿ 'ಡಂಕಿ'ಗಿಂತಲೂ ಒಂದು ಹೆಜ್ಜೆ ಮುಂದಿರುವ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸುವ ನಿರೀಕ್ಷೆಯಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರವು ಡಂಕಿಗೆ ಕಲೆಕ್ಷನ್ ವಿಚಾರದಲ್ಲಿ ಅಡ್ಡಿಯಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಡಂಕಿ ತೆರೆಗೆ: ಸಿನಿಪ್ರಿಯರು ಹೀಗಂದ್ರು! ಹೀಗಿದೆ ಸೋಷಿಯಲ್ ಮೀಡಿಯಾದ ಚಿತ್ರ ವಿಮರ್ಶೆ !