ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಸುದ್ದಿಯಾಗುತ್ತಿರುವ ಸಿನಿಮಾ 'ಶುಗರ್ ಫ್ಯಾಕ್ಟರಿ'. ಡಾರ್ಲಿಂಗ್ ಕೃಷ್ಣ, ಸೋನಾಲ್ ಮಾಂಟೆರೊ, ಶಿಲ್ಪಾ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ಮುಖ್ಯಭೂಮಿಕೆಯ 'ಶುಗರ್ ಫ್ಯಾಕ್ಟರಿ' ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಟ್ರೇಲರ್ ಹಾಗೂ ಹಾಡುಗಳಿಂದ ಸಾಕಷ್ಟು ಕುತೂಹಲ ಹುಟ್ಟಿಸಿರುವ ಸಿನಿಮಾದ ಮತ್ತೊಂದು ಸುಮಧುರ ಗೀತೆ ಬಿಡುಗಡೆಯಾಗಿದೆ.
- " class="align-text-top noRightClick twitterSection" data="">
ಅರ್ಮಾನ್ ಮಲಿಕ್ ಕಂಠಸಿರಿ: ರಾಘವೇಂದ್ರ ಕಾಮತ್ ಬರೆದಿರುವ 'ಹಣೆಯಬರಹ' ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲಿಕ್ ಇಂಪಾಗಿ ಹಾಡಿದ್ದಾರೆ. ಭಾವನೆಗಳನ್ನು ಬಿಂಬಿಸುವ ಈ ಹಾಡಿಗೆ ಕಬೀರ್ ರಫಿ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಹಾಡು ಸಿನಿಪ್ರಿಯರ ಮನಗೆದ್ದಿದೆ.
ಟ್ರಯಾಂಗಲ್ ಲವ್ ಸ್ಟೋರಿ: 'ಶುಗರ್ ಫ್ಯಾಕ್ಟರಿ' ಟ್ರಯಾಂಗಲ್ ಲವ್ ಸ್ಟೋರಿ ಸುತ್ತ ಸುತ್ತುತ್ತದೆ. ಸದ್ಯ ಅನಾವರಣಗೊಂಡಿರುವ ಹಾಡಿನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮಾಂಟೆರೋ, ಅದ್ವಿತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಮುಕ್ತಾಯವಾದ ಬೆನ್ನಲ್ಲೇ ರೀ ರೆಕಾರ್ಡಿಂಗ್ ಕೆಲಸಗಳು ಶುರುವಾಗಿವೆ. ರಂಗಾಯಣ ರಘು, ಗೋವಿಂದೇ ಗೌಡ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಗೋವಾ, ಬೆಂಗಳೂರು, ಮೈಸೂರು ಹಾಗೂ ಕಜಕಿಸ್ಥಾನದಲ್ಲಿ 55 ದಿನಗಳ ಚಿತ್ರೀಕರಣ ನಡೆದಿದೆ. ಅದ್ಧೂರಿ ಸೆಟ್ಗಳು ಚಿತ್ರದ ಪ್ರಮುಖ ಆಕರ್ಷಣೆ. ಡಾರ್ಲಿಂಗ್ ಕೃಷ್ಣ ಈವರೆಗೂ ಅಭಿನಯಿಸಿರುವ ಚಿತ್ರಗಳಿಗೆ ಹೋಲಿಸಿದರೆ 'ಶುಗರ್ ಫ್ಯಾಕ್ಟರಿ' ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಎನ್ನಲಾಗುತ್ತಿದೆ.
ಇದನ್ನೂ ಓದಿ: 'ಬ್ಯಾಟೆಮರ' ಕಥಾಸಂಕಲನ ಬಿಡುಗಡೆಗೊಳಿಸಿದ ರಾಜ್ ಬಿ.ಶೆಟ್ಟಿ
ಖ್ಯಾತ ಸಾಹಿತಿಗಳಾದ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಚೇತನ್ ಕುಮಾರ್, ಚಂದನ್ ಶೆಟ್ಟಿ, ಅರಸು ಅಂತಾರೆ, ರಾಘವೇಂದ್ರ ಕಾಮತ್, ಗೌಸ್ ಫಿರ್ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಯೋಗಾನಂದ್ ಹಾಗೂ ಚೇತನ್ ಕುಮಾರ್ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಅರ್ಜುನ್ ಅವರ ಸಾಹಸ ನಿರ್ದೇಶನವಿದೆ. ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್ ಬಂಡವಾಳ ಹಾಕಿದ್ದಾರೆ.
ಇದನ್ನೂ ಓದಿ: 'ಕಾಫಿ ವಿತ್ ಕರಣ್' ಶೋ: ಇವರೇ ನೋಡಿ ಮುಂದಿನ ಅತಿಥಿಗಳು!
ವಿನೂತನ ಪ್ರಚಾರದ ಮೂಲಕ ಶುಗರ್ ಫ್ಯಾಕ್ಟರಿ ಈಗಾಗಲೇ ಸಿನಿರಸಿಕರ ಗಮನ ಸೆಳೆದಿದೆ. ದೀಪಕ್ ಅರಸ್ ನಿರ್ದೇಶನದ 'ಶುಗರ್ ಫ್ಯಾಕ್ಟರಿ' ಹೇಗಿರಬಹುದೆಂಬ? ಕೌತುಕ ಎಲ್ಲರಲ್ಲೂ ಮನೆಮಾಡಿದೆ. ಟ್ರೇಲರ್ ಮತ್ತು ಹಾಡುಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಹುನಿರೀಕ್ಷಿತ ನವೆಂಬರ್ 24ರಂದು ತೆರೆಕಾಣಲಿದೆ.