ನೆಲ್ಲೂರು (ಆಂಧ್ರಪ್ರದೇಶ): "ಅಮ್ಮ, ಅಪ್ಪ, ತಂಗಿ.. ನನ್ನನ್ನು ಕ್ಷಮಿಸಿ.. ನೃತ್ಯ ನಿರ್ದೇಶಕರಿಗೆ ನಾನು ನೋವುಂಟು ಮಾಡುತ್ತಿದ್ದೇನೆ. ಸಾಲ ಹೆಚ್ಚಾಗಿದೆ. ತೀರಿಸಲಾಗದೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಕೊರಿಯೊಗ್ರಾಫರ್ ಚವಾ ಚೈತನ್ಯ (32) ಎಂಬವರು ವಿಡಿಯೋ ಮಾಡಿ, ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ನೆಲ್ಲೂರು ಕ್ಲಬ್ ಹೋಟೆಲ್ನಲ್ಲಿ ಘಟನೆ ನಡೆದಿದೆ.
ಸೆಲ್ಫಿ ವಿಡಿಯೋದಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ನೀಡಿದ ಮಾಹಿತಿಯಂತೆ, ಚಾವ ಚೈತನ್ಯ ಲಿಂಗಸಮುದ್ರ ತಾಲೂಕಿನ ಮುತ್ತವಾರಿಪಾಲೇನಿಯ ಲಕ್ಷ್ಮೀರಾಜ್ಯಮ್ ಸುಬ್ಬರಾವ್ ದಂಪತಿಯ ಪುತ್ರ. ನೃತ್ಯ ಸಂಯೋಜಕರಾಗಿ ಜೀವನ ಸಾಗಿಸುತ್ತಿದ್ದರು. ತಾಯಿ, ತಂದೆ ಮತ್ತು ತಂಗಿಯೊಂದಿಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಹಲವು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ನೃತ್ಯ ಕಾರ್ಯಕ್ರಮಗಳಿಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಿಶ್ವ ನೃತ್ಯ ದಿನಾಚರಣೆಯ ನಿಮಿತ್ತ ನಗರದ ಕಲಾಂಜಲಿ ಆರ್ಕೆಸ್ಟ್ರಾ ಮತ್ತು ಇವೆಂಟ್ಸ್‌ನ ಸಂಘಟಕರು ಇದೇ 29 ರಂದು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಚೈತನ್ಯರನ್ನು ಆಹ್ವಾನಿಸಿದ್ದರು. ಈ ಕಾರ್ಯಕ್ರಮಕ್ಕೆಂದು ನೆಲ್ಲೂರು ತಲುಪಿದ ಅವರು ಬಾರಾಶಾಹಿದ್ ದರ್ಗಾ ಬಳಿಯ ನೆಲ್ಲೂರು ಕ್ಲಬ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದರು. ಶನಿವಾರ ಪುರ ಮಂದಿರದಲ್ಲಿ ಕಲಾಂಜಲಿ ಆರ್ಕೆಸ್ಟ್ರಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಭಾನುವಾರ ಸಂಜೆ ಸೆಲ್ಫಿ ವಿಡಿಯೋ ಮಾಡಿ, ಸಾಲ ತೀರಿಸಲಾಗದೇ ಸಾಯುತ್ತಿದ್ದೇನೆ, ನನ್ನ ಕ್ಷಮಿಸಿ ಎಂದು ತಂದೆ-ತಾಯಿ, ತಂಗಿ, ಸ್ನೇಹಿತರಿಗೆ ಸಾವಿನ ಕಾರಣ ತಿಳಿಸಿದ್ದಾರೆ. ವಿಡಿಯೋವನ್ನು ತನ್ನ ಸ್ನೇಹಿತರ ಮೊಬೈಲ್ಗೆ ಕಳುಹಿಸಿ, ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಡಿಯೋ ನೋಡಿದ ಸ್ನೇಹಿತರು ತಕ್ಷಣ ನೆಲ್ಲೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದರ್ಗಾಮಿಟ್ಟಾ ಇನ್‌ಸ್ಪೆಕ್ಟರ್ ಸಿ.ಎಚ್.ಸೀತಾರಾಮಯ್ಯ ಹಾಗೂ ಎಸ್‌ಎಸ್‌ಐ ವಿಜಯಕುಮಾರ್ ನೆಲ್ಲೂರು ಕ್ಲಬ್‌ಗೆ ಆಗಮಿಸಿ ಬಾಗಿಲು ತೆರೆಯಲು ಯತ್ನಿಸಿ ವಿಫಲವಾಗಿದ್ದರು. ಪೊಲೀಸರು ಕಿಟಕಿಯ ಮೂಲಕ ಒಳ ಪ್ರವೇಶಿಸಿದ್ದರು. ಅಷ್ಟೊತ್ತಿಗಾಗಲೇ ಚೈತನ್ಯ ಮೃತಪಟ್ಟಿದ್ದರು. ಪೊಲೀಸರು ನೆಲ್ಲೂರು ಗ್ರಾಮಾಂತರ ತಾಲೂಕಿನ ಧನಲಕ್ಷ್ಮೀಪುರಂನಲ್ಲಿರುವ ಪೋಷಕರು ಹಾಗೂ ಚಿಕ್ಕಪ್ಪ ಮಲ್ಯದ್ರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಡ್ಯಾನ್ಸ್ ಕೊರಿಯೋಗ್ರಾಫರ್ ಚೈತನ್ಯ ತೆಲುಗಿನ ಜನಪ್ರಿಯ ನೃತ್ಯ ಕಾರ್ಯಕ್ರಮ ಢೀ ಯಲ್ಲಿ ಕಾಣಿಸಿಕೊಂಡಿದ್ದರು. ಸಾಕಷ್ಟು ಸಾಲ ಮಾಡಿದ್ದು, ಮರುಪಾವತಿಸಲು ಸಾಧ್ಯವಾಗದ ಕಾರಣ ಅವರ ಆರ್ಥಿಕ ಬದ್ಧತೆಗಳು ಹೊರೆಯಾಗುತ್ತಿದ್ದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ: ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳಿಗೆ ಆಘಾತವಾಗಿದೆ. ಚೈತನ್ಯ ಅವರ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಜೀವನದ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಗೋಡೆ ಮೇಲೆ ಡೆತ್ ನೋಟ್ ಬರೆದಿಟ್ಟು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ