ಮುಂಬೈ, ಮಹಾರಾಷ್ಟ್ರ: ಬಾಲಿವುಡ್‌ನ ಬಹು ಬೇಡಿಕೆ ನಟ ಸಲ್ಮಾನ್ ಖಾನ್ ಮೊದಲ ಬಾರಿಗೆ ತಮ್ಮ ಪ್ರೇಮ ಕಥೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತನ್ನ ಮಾಜಿ ಗೆಳತಿಯರೆಲ್ಲ ಒಳ್ಳೆಯವರು. ತಪ್ಪು ನನ್ನ ಕಡೆಯೇ ಇತ್ತು ಎಂದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಸಲ್ಮಾನ್ ಹೇಳಿದ್ದಾರೆ. ಸಂದರ್ಶನದಲ್ಲಿ ‘ನಿಮ್ಮ ಪ್ರೇಮಕಥೆಗಳ ಜೊತೆ ಜೀವನ ಚರಿತ್ರೆ ಬರೆಯಲು ಬಯಸುತ್ತೀರಾ?’ ಎಂದು ಪ್ರಶ್ನಿಸಿದಾಗ, ‘ನನ್ನ ಎಲ್ಲ ಪ್ರೇಮಕಥೆಗಳೂ ನನ್ನೊಂದಿಗೆ ಸಮಾಧಿಯಾಗುತ್ತವೆ’ ಎಂದು ಉತ್ತರಿಸಿದರು.
ನಂತರ ಅವರ ಮದುವೆ ಮತ್ತು ಮಕ್ಕಳ ಬಗ್ಗೆ ಮಾತನಾಡುತ್ತಾ, ''ನನ್ನ ಜೀವನದಲ್ಲಿ ಸರಿಯಾದ ವ್ಯಕ್ತಿ ಬಂದಾಗ ನಾನು ಖಂಡಿತ ಮದುವೆಯಾಗುತ್ತೇನೆ. ನಿಜ ಹೇಳಬೇಕೆಂದರೆ, ನನ್ನ ಎಲ್ಲಾ ಮಾಜಿ ಗೆಳತಿಯರು ಒಳ್ಳೆಯವರಾಗಿದ್ದಾರೆ. ಅವರ ಕಡೆಯಿಂದ ಯಾವುದೇ ತಪ್ಪಿಲ್ಲ. ನನ್ನಿಂದ ಎಲ್ಲವೂ ತಪ್ಪಾಗಿದೆ. ಯಾಕೆಂದರೆ.. ಮೊದಲ ಗೆಳತಿಯಿಂದ ಬೇರ್ಪಟ್ಟಾಗ ಅದು ತನ್ನ ತಪ್ಪೆಂದು ಭಾವಿಸಿದ್ದಳು. ಅದಾದ ನಂತರ ಅದೇ ಸಾಲಾಗಿ ಪುನರಾವರ್ತನೆಗೊಂಡರೆ.. ತಪ್ಪು ಅವರ ಕಡೆಯಲ್ಲ, ನನ್ನ ಕಡೆಯದ್ದು ಎಂಬುದು ಅರ್ಥವಾಗುತ್ತದೆ. ನನ್ನನ್ನು ಸಂತೋಷದಿಂದ ನೋಡಿಕೊಳ್ಳಲು ಆಗುವುದಿಲ್ಲ ಎಂಬ ಭಯದಿಂದ ಅವರು ನನ್ನನ್ನು ತೊರೆದಿರಬಹುದು. ಅವರು ಎಲ್ಲೇ ಇದ್ದರೂ ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ. ಇನ್ನು, ಮಕ್ಕಳ ವಿಚಾರಕ್ಕೆ ಬಂದರೆ.. ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ನಾನು ತಂದೆಯಾಗಲು ಬಯಸುತ್ತೇನೆ. ನಮ್ಮ ಕಾನೂನುಗಳು ಮದುವೆಯ ಹೊರತಾಗಿ ಪಿತೃತ್ವವನ್ನು ಸ್ವೀಕರಿಸುವುದಿಲ್ಲ” ಎಂದು ಅವರು ಹೇಳಿದರು.
ಅದೇ ಸಂದರ್ಶನದಲ್ಲಿ ಅವರು ತಮಗೆ ಬರುತ್ತಿರುವ ಬೆದರಿಕೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಅಭದ್ರತೆಯಲ್ಲಿ ಬದುಕುವುದಕ್ಕಿಂತ ಸುರಕ್ಷಿತವಾಗಿರುವುದು ಉತ್ತಮ. ಹೌದು, ಬೆದರಿಕೆಯಿಂದಾಗಿ ನನಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದರಿಂದ ಹಿಂದಿನಂತೆ ಒಬ್ಬಂಟಿಯಾಗಿ ಸೈಕಲ್ ಸವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಟ್ರಾಫಿಕ್‌ನಲ್ಲಿಯೂ ಭದ್ರತಾ ತಂಡವು ನನ್ನ ವಾಹನವನ್ನು ಸುತ್ತುವರೆದಿರುತ್ತದೆ. ಇದರಿಂದ ಇತರ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ.. ಏನಾಗಬೇಕೋ ಅದು ಆಗುತ್ತೆ. ನನಗೆ ದೇವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಈಗ ನನ್ನ ಸುತ್ತಲೂ ಅನೇಕ ಬಂದೂಕುಗಳಿವೆ. ನಾನು ಅವರಿಗೆ ಭಯಪಡುತ್ತೇನೆ ಎಂದು ಸಲ್ಮಾನ್ ಹೇಳಿದ್ದಾರೆ.
ಸಿನಿಮಾ ಕೆಲಸ ಗಮನಿಸುವುದಾದರೆ, ಇತ್ತೀಚೆಗೆ ಆ್ಯಕ್ಷನ್ ಎಂಟರ್‌ಟೈನರ್ ಚಲನಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ನಲ್ಲಿ ಕಾಣಿಸಿಕೊಂಡರು. ಇದು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ಪಲಕ್ ತಿವಾರಿ, ಸಿದ್ಧಾರ್ಥ್ ನಿಗಮ್, ವೆಂಕಟೇಶ್ ದಗ್ಗುಬಾಟಿ, ಭೂಮಿಕಾ ಚಾವ್ಲಾ, ರಾಘವ್ ಜುಯಲ್ ಮತ್ತು ಜಸ್ಸಿ ಗಿಲ್ ಸೇರಿದಂತೆ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮುಂದೆ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಟೈಗರ್ 3ನಲ್ಲಿ ನಟಿ ಕತ್ರಿನಾ ಕೈಫ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. 2023ರ ದೀಪಾವಳಿ ಸಂದರ್ಭದಲ್ಲಿ ಸಿನಿಮಾ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಪಠಾಣ್ ನಟ ಶಾರುಖ್ ಖಾನ್ ನಟಿಸುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ತೆರೆ ಕಂಡಿರುವ ಟೈಗರ್ ಭಾಗ 1 ಮತ್ತು 2ರಲ್ಲಿ ಕೂಡ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ತೆರೆ ಹಂಚಿಕೊಂಡಿದ್ದಾರೆ.
ಓದಿ: 'ಮಗುವನ್ನು ಹೊಂದುವ ಆಸೆಯಿತ್ತು'.. ಮದುವೆ, ಮಕ್ಕಳ ಬಗ್ಗೆ ಮಾತನಾಡಿದ ಬಾಲಿವುಡ್ ಬ್ಯಾಚುಲರ್ ಸಲ್ಲು