ಮುಂಬೈ (ಮಹಾರಾಷ್ಟ್ರ): ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಕ್ಲೀನ್‌ಚಿಟ್ ಪಡೆದಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗುರುವಾರ ಇಲ್ಲಿಯ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ತಮ್ಮ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಕೋರಿ ಮನವಿ ಮಾಡಿದ್ದಾರೆ. ಈ ಮನವಿ ಆಲಿಸಿದ ನ್ಯಾಯಾಧೀಶ ವಿ.ವಿ.ಪಾಟೀಲ್ ಅವರು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಗೆ ಉತ್ತರ ನೀಡುವಂತೆ ಸೂಚಿಸಿ ಜುಲೈ 13ಕ್ಕೆ ವಿಚಾರಣೆ ಮುಂದೂಡಿದರು.
ಕಳೆದ ವರ್ಷ ಅಕ್ಟೋಬರ್ ಆರಂಭದಲ್ಲಿ ಹೈ-ಪ್ರೊಫೈಲ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿತ್ತು. ಜಾಮೀನಿಗಾಗಿ ಹಲವು ಬಾರಿ ಪ್ರಯತ್ನಿಸಿ ಹಿನ್ನಡೆ ಅನುಭವಿಸಿದ್ದರು. ಆದರೆ, ಸುದೀರ್ಘ ವಿಚಾರಣೆಯ ನಂತರ ಕೋರ್ಟ್ ಜಾಮೀನು ನೀಡಿತ್ತು. ಈ ಸಂದರ್ಭದಲ್ಲಿ ಇವರ ಪಾಸ್‌ಪೋರ್ಟ್ ಸೇರಿದಂತೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಮೇ 27ರಂದು ತನಿಖಾ ಸಂಸ್ಥೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಆರ್ಯನ್ ಹೆಸರನ್ನು ಆರೋಪಿ ಪಟ್ಟಿಯಿಂದ ಕೈಬಿಡಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರು ಜನರನ್ನು ಅಂದೇ ಬಿಡುಗಡೆ ಮಾಡಲಾಗಿತ್ತು. ಸದ್ಯ ಆರೋಪಮುಕ್ತರಾದ ಆರ್ಯನ್ ಖಾನ್ ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದು ಪಾಸ್‌ಪೋರ್ಟ್‌ಗಾಗಿ ಕೋರ್ಟ್ ಕದ ತಟ್ಟಿದ್ದಾರೆ.
ಇದನ್ನೂ ಓದಿ: ದೇವೇಗೌಡರು ಸದ್ಯದಲ್ಲೇ ನಾಲ್ವರ ಹೆಗಲ ಮೇಲೆ ಹೋಗೋದಿದೆ: ಕಾಂಗ್ರೆಸ್ ಮುಖಂಡ ರಾಜಣ್ಣ