ಸೂಪರ್ ಹಿಟ್ ಆದ ಚಿತ್ರಗಳು ಹಾಗು ಹಾಡುಗಳ ಪ್ರಸಿದ್ಧ ಪದಗಳು ಸಿನಿಮಾ ಟೈಟಲ್ ಆಗೋ ಸಂಸ್ಕೃತಿ ಕನ್ನಡ ಸಿನಿಮಾ ರಂಗದಲ್ಲಿ ಹೆಚ್ಚಾಗುತ್ತಿದೆ. 1999ರಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಸಿನಿಮಾ ಸೂರ್ಯವಂಶ. ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರ ಸೂಪರ್ ಹಿಟ್ ಆಗುವದರ ಜೊತೆಗೆ ಆ ಕಾಲದಲ್ಲಿ ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿತ್ತು. ಈಗ ಸೂರ್ಯವಂಶದ ಟೈಟಲ್ ಮರು ಬಳಕೆ ಆಗುತ್ತಿದೆ.
ಈಗಾಗಲೇ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ನಟ ಅನಿರುದ್ಧ್ ಜತ್ಕರ್ ಈ ಸೂರ್ಯವಂಶ ಸೀರಿಯಲ್ ಮೂಲಕ ಮತ್ತೆ ಸ್ಮಾಲ್ ಸ್ಕ್ರೀನ್ನಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಶ್ರೀಮಂತ ಉದ್ಯಮಿ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಅಭಿನಯಿಸುವ ಮೂಲಕ ಸಕ್ಸಸ್ ಕಂಡಿದ್ದರು. ಆದರೆ, ಜೊತೆಯಲಿ ಜೊತೆಯಲಿ ನಿರ್ದೇಶಕ ಮತ್ತು ಅನಿರುದ್ಧ್ ಮಧ್ಯೆ ಮನಸ್ತಾಪ ಉಂಟಾಗಿ ನಟ ಅನಿರುದ್ಧ್ ಅವರನ್ನ ಜೊತೆ ಜೊತೆಯಲಿ ಸೀರಿಯಲ್‌ನಿಂದ ಕೈಬಿಡಲಾಗಿತ್ತು.
ಅಷ್ಟೇ ಅಲ್ಲ ಎರಡು ವರ್ಷಗಳವರೆಗೆ ನಟ ಅನಿರುದ್ಧ್ ಅವರನ್ನು ಯಾವುದೇ ಧಾರಾವಾಹಿ ಅಥವಾ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳದಂತೆ ಕಿರುತೆರೆ ನಿರ್ಮಾಪಕರ ಸಂಘ ಚಿತ್ರಮಂಡಳಿಯಲ್ಲಿ ಒತ್ತಾಯಿಸಿತ್ತು. ಆದ್ರೀಗ ನಟ ಅನಿರುದ್ಧ್ ಕಿರುತೆರೆಗೆ ಮರಳಿದ್ದಾರೆ. ಹೊಸ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಅನಿರುದ್ಧ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಎಸ್ ನಾರಾಯಣ್ ಜೊತೆ ಕಾಣಿಸಿಕೊಂಡಿರುವ ಫೋಟೋಗಳು ಅನಾವರಣಗೊಂಡಿದೆ.
ಸೂರ್ಯವಂಶ ಹೆಸರಿನ ಹೊಸ ಸೀರಿಯಲ್ನಲ್ಲಿ ನಟ ಅನಿರುದ್ಧ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಎಸ್.ನಾರಾಯಣ್ ಸೂರ್ಯವಂಶ ಧಾರವಾಹಿಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಬಗ್ಗೆ ಅನಿರುದ್ಧ್, ''ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ'' ಅಂತಾ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಡಾ. ವಿಷ್ಣುವರ್ಧನ್ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರದ ಟೈಟಲ್ ಈಗ ಅಳಿಯ ಅನಿರುದ್ಧ್ ನಟಿಸುತ್ತಿರುವ ಸೀರಿಯಲ್ ಶೀರ್ಷಿಕೆ ಆಗಿರೋದು ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ.
ಇದನ್ನೂ ಓದಿ: 2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಿದ ಸಿನಿಮಾಗಳು: ಕೆಜಿಎಫ್, ಕಾಂತಾರ ಯಾವ ಸ್ಥಾನದಲ್ಲಿದೆ?