ಬಾಲಿವುಡ್ ತಾರಾ ದಂಪತಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆಯಾಗಿ ಇದೇ ಮೊದಲ ಬಾರಿಗೆ ನಟಿಸಿರುವ 'ಬ್ರಹ್ಮಾಸ್ತ್ರ' ಇಂದು ಜಗತ್ತಿನೆಲ್ಲೆಡೆಯ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಬಹಿಷ್ಕಾರದ ಬಿಸಿ, ಸೌತ್ ಸಿನಿಮಾ ಇಂಡಸ್ಟ್ರಿಯ ಅಬ್ಬರಕ್ಕೆ ನಲುಗಿರುವ ಬಾಲಿವುಡ್ಗೆ ಈ ಸಿನಿಮಾ ಚೇತರಿಕೆ ನೀಡುವುದೇ ಎಂಬುದನ್ನು ಕಾದುನೋಡಬೇಕಿದೆ.
400 ಕೋಟಿ ರೂಪಾಯಿ ವೆಚ್ಚ! ಹಾಗಾಗಿ, 'ಬ್ರಹ್ಮಾಸ್ತ್ರ' ತಂಡಕ್ಕೆ ಇಂದು ಅಗ್ನಿಪರೀಕ್ಷೆಯ ದಿನ. ಚಿತ್ರ ನಿರ್ಮಾಣಕ್ಕೆ ಒಂಭತ್ತು ವರ್ಷಗಳ ಸುದೀರ್ಘ ಸಮಯ ತೆಗೆದುಕೊಳ್ಳಲಾಗಿದೆ. 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರ ಮೊದಲ ದಿನ 25 ಕೋಟಿ ರೂ. ಗಳಿಸಬಹುದು ಎಂಬುದು ಒಂದು ಅಂದಾಜು.
ಮುಂಗಡ ಬುಕ್ಕಿಂಗ್ ಜೋರಾಗಿ ನಡೆದಿತ್ತು. ಕೋವಿಡ್ ಬಳಿಕ ಹೆಚ್ಚು ಮುಂಗಡ ಬುಕ್ಕಿಂಗ್ ಆಗಿರುವ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆರ್ಆರ್ಆರ್, ಭೂಲ್ಭುಲೈಯಾ ಟಿಕೆಟ್ ಬುಕ್ಕಿಂಗ್ ದಾಖಲೆಯನ್ನು ಇದು ಹಿಂದಕ್ಕೆ ತಳ್ಳಿದೆ. ಚಿತ್ರದಲ್ಲಿ ರಣ್ಬೀರ್, ಆಲಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರೆ ಅಮಿತಾಬ್ ಬಚ್ಚನ್, ನಾಗಾರ್ಜುನ್ ಮತ್ತು ಮೌನಿ ರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣ: ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ ಭಾಗ 1 ಶಿವ' ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು, ಕಥೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ ಆಗಿದೆ. ಚಿತ್ರವನ್ನು ಎಸ್.ಎಸ್ ರಾಜಮೌಳಿ ತಮಿಳು, ತೆಲುಗು, ಕನ್ನಡ, ಮಲಯಾಳಂನಲ್ಲಿ ನಿರ್ಮಿಸಿ ಪ್ರಸ್ತುತಪಡಿಸಿದ್ದಾರೆ. ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ಇಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ 5 ಭಾಷೆಗಳಲ್ಲಿ ಭರ್ಜರಿಯಾಗಿ ರಿಲೀಸ್ ಆಗಿದೆ.
ಇದನ್ನೂ ಓದಿ: ಟೈಟಾನಿಕ್ ಸಿನಿಮಾ 11 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದು ಯಾವ ವಿಭಾಗದಲ್ಲಿ ಗೊತ್ತಾ?
ನಾನು ಇಷ್ಟವಾಗದಿದ್ದರೆ ಸಿನಿಮಾ ನೋಡಬೇಡಿ ಎಂದಿದ್ದ ಆಲಿಯಾ: ಕಳೆದೊಂದು ತಿಂಗಳಿನಿಂದ ಸಿನಿಮಾ ಪ್ರಚಾರವೂ ಜೋರಾಗಿ ನಡೆದಿದೆ. ಮತ್ತೊಂದೆಡೆ ಸಿನಿಮಾ ನೋಡದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ಅಭಿಯಾನ ಕೂಡ ಆರಂಭಿಸಲಾಗಿತ್ತು. "ನಾನು ಇಷ್ಟವಾಗದಿದ್ದರೆ ಸಿನಿಮಾ ನೋಡಬೇಡಿ" ಎಂಬ ನಟಿ ಆಲಿಯಾ ಭಟ್ ಹೇಳಿಕೆಗೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿ ಸಿನಿಮಾ ಬಹಿಷ್ಕರಿಸುವಂತೆ ಅಭಿಯಾನ ಆರಂಭಿಸಿದ್ದರು. ಜೊತೆಗೆ, 2011ರಲ್ಲಿ ರಾಕ್‌ಸ್ಟಾರ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ರಣಬೀರ್ ಕಪೂರ್ ಸಂದರ್ಶನವೊಂದರಲ್ಲಿ ಗೋಮಾಂಸದ ಬಗ್ಗೆ ಮಾತನಾಡಿದ್ದರು.
ಗೋಮಾಂಸ ಇಷ್ಟ ಎಂದಿದ್ದ ರಣಬೀರ್ ಕಪೂರ್: ನನ್ನ ಕುಟುಂಬವು ಪೇಶಾವರದಿಂದ ಬಂದಿದೆ. ನನಗೆ ಮಟನ್, ಪಾಯ ಮತ್ತು ಗೋಮಾಂಸ ಇಷ್ಟ ಎಂದು ರಣಬೀರ್ ನೀಡಿದ್ದ ಹೇಳಿಕೆಯೂ ಕೂಡ ಸಿನಿಮಾ ಬಹಿಷ್ಕಾರ ಅಭಿಯಾನಕ್ಕೆ ಇಂಬು ನೀಡಿತ್ತು. ಆದರೂ ಇಡೀ ಚಿತ್ರತಂಡ ಅದ್ಧೂರಿ ಪ್ರಚಾರ ಕೈಗೊಂಡು ಇಂದು ಸಿನಿಮಾ ಬಿಡುಗಡೆ ಮಾಡಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಿದೆ. ಸದ್ಯ ಸಿನಿಮಾ ನೋಡಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.