ಸೌತ್ ಸೂಪರ್ಸ್ಟಾರ್ ನಟಿ ಸಮಂತಾ ರುತ್ ಪ್ರಭು ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸುವ ಸಲುವಾಗಿ, ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿದ್ದಾರೆ. ಚೇತರಿಕೆಯ ನಂತರ ಹೊಸ ಪ್ರಾಜೆಕ್ಟ್ಗಳತ್ತ ಗಮನ ಹರಿಸಲಿದ್ದಾರೆ. ಸದ್ಯ ಮಯೋಸಿಟಿಸ್ನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ದೇಶ, ವಿದೇಶ ಸುತ್ತಿ ತಮ್ಮ ರಜಾದಿನಗಳನ್ನು ಎಂಜಾಯ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ಹೈದರಾಬಾದ್ಗೆ ಮರಳಿರುವುದಾಗಿ ವರದಿಯಾಗಿದೆ.

ಇದೀಗ ಸಮಂತಾ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಫೋಟೋ ವೈರಲ್ ಆಗಿದೆ. ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಯ ಮೇಲೆ ಮಲಗಿ ಡ್ರಿಪ್ಸ್ ಹಾಕಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. "ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯೋಜನಗಳನ್ನು ಹೊಂದಿದೆ. ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯ ಸುಧಾರಿಸುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಸ್ನಾಯುಗಳ ಕಾರ್ಯವನ್ನು ಉತ್ತಮವಾಗಿಸುತ್ತದೆ. ವೈರಸ್ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ಹೃದಯ ರಕ್ತನಾಳದ ವ್ಯವಸ್ಥೆ ಮತ್ತು ಮೂಳೆಗಳು ಬಲವಾಗಿರುತ್ತದೆ" ಎಂದು ಬರೆದಿದ್ದಾರೆ.
ಸದ್ಯ ಸಮಂತಾ ಅವರ ಪೋಸ್ಟ್ ವೈರಲ್ ಆಗಿದೆ. ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ಸ್ಟೈಲಿಶ್ ಲುಕ್ನಲ್ಲಿ ಸಮಂತಾ ರುತ್ ಪ್ರಭು: ಹೊಸ ಫೋಟೋಗಳಿಲ್ಲಿವೆ ನೋಡಿ
ಸಮಂತಾ ಮುಂದಿನ ಸಿನಿಮಾಗಳು: ಇತ್ತೀಚೆಗೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ 'ಖುಷಿ' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಸೆಪ್ಟೆಂಬರ್ 1ರಂದು ಬಿಡುಗಡೆಯಾದ ಚಿತ್ರ ಸೂಪರ್ ಹಿಟ್ ಆಗಿತ್ತು. ಸದ್ಯ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಲು ಲಭ್ಯವಿದೆ. ಇನ್ನೂ ರಾಜ್ ಮತ್ತು ಡಿಜೆ ನಿರ್ದೇಶನದ 'ಸಿಟಾಡೆಲ್'ನ ಭಾರತೀಯ ಆವೃತ್ತಿ ಬಿಡುಗಡೆಗೆ ಸಜ್ಜಾಗುತ್ತಿದೆ. ಇದನ್ನು ಜನಪ್ರಿಯ ಓಟಿಟಿ ಫ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ ನಿರ್ಮಿಸಿದೆ. ಈ ಸಿನಿಮಾದ ಕೆಲಸಗಳನ್ನು ಈಗಾಗಲೇ ಸಮಂತಾ ಮುಕ್ತಾಯಗೊಳಿಸಿದ್ದಾರೆ.
ಸಲ್ಮಾನ್ ಖಾನ್ ಜೊತೆ ಸ್ಕ್ರೀನ್ ಶೇರ್?: ಇತ್ತೀಚೆಗಿನ ಮಾಹಿತಿ ಪ್ರಕಾರ, ನಟಿ ಸಮಂತಾ ರುತ್ ಪ್ರಭು ಅವರು ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಮುಂದಿನ ಸಿನಿಮಾ ಇದಾಗಿರಲಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಸುದ್ದಿ ಸದ್ದು ಮಾಡುತ್ತಿದ್ದು, ಅಧಿಕೃತ ಘೋಷಣೆಗೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.
ಈ ಸಿನಿಮಾ ಸಂಬಂಧ ಚರ್ಚೆಗಾಗಿ ನಟಿ ಸಮಂತಾ ಇತ್ತೀಚೆಗೆ ಮುಂಬೈಗೆ ಬಂದಿದ್ದರು. ಚಿತ್ರಕ್ಕಾಗಿ ಸಮಂತಾ ಅವರೊಂದಿಗೆ ಚರ್ಚೆ ನಡೆದಿದೆ ಎಂದು ವರದಿಗಳು ಹೇಳಿವೆ. ಮತ್ತೊಂದೆಡೆ ಪೊನ್ನಿಯಿನ್ ಸೆಲ್ವನ್ ನಟಿ ತ್ರಿಶಾ ಕೃಷ್ಣನ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸುದ್ದಿ ನಿಜವಾದರೆ, ಸಲ್ಮಾನ್ ಮತ್ತು ಸಮಂತಾರನ್ನು ಬೆಳ್ಳಿ ಪರದೆ ಮೇಲೆ ಜೊತೆಯಾಗಿ ವೀಕ್ಷಿಸುವ ಸೌಭಾಗ್ಯ ಅವರ ಅಭಿಮಾನಿಗಳಿಗೆ ಸಿಗಲಿದೆ.
ಇದನ್ನೂ ಓದಿ: ಕರಣ್ ಜೋಹರ್ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸಲ್ಮಾನ್ - ಸಮಂತಾ?!