'ಮಳ್ಳಿ ಪೆಳ್ಳಿ' (ಮತ್ತೆ ಮದುವೆ) ಚಿತ್ರದ ಮೂಲಕ ಬಹುಭಾಷಾ ತಾರೆ ಪವಿತ್ರಾ ಲೋಕೇಶ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ನಿನ್ನೆಯಷ್ಟೇ ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ. ಚಿತ್ರರಸಿಕರ ಗಮನ ಸೆಳೆಯುವಲ್ಲಿ ಯಶ ಕೂಡ ಕಂಡಿದೆ. ಟಾಲಿವುಡ್ನ ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಸಖತ್ ಸದ್ದು ಮಾಡುತ್ತಿದೆ.
ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರು ರಿಲೇಶನ್ ಶಿಪ್ನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ವಿಚಾರವನ್ನಿಟ್ಟುಕೊಂಡು ನಿರ್ದೇಶಕ ಎಂ.ಎಸ್.ರಾಜು ಅವರು ಮಳ್ಳಿ ಪೆಳ್ಳಿ ಚಿತ್ರ ತಯಾರಿಸಿದ್ದಾರಂತೆ. ಚಿತ್ರದಲ್ಲಿ ನರೇಶ್-ಪವಿತ್ರ ಸಂಬಂಧ ಅಷ್ಟೇ ಅಲ್ಲದೇ ಅವರಿಬ್ಬರ ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಬಗ್ಗೆ ಬಂದಿರುವ ಸುದ್ದಿ, ಅದಕ್ಕೆ ಕಾರಣಗಳೇನು ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ.
ಶುಕ್ರವಾರ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನರೇಶ್-ಪವಿತ್ರಾ ಲೋಕೇಶ್ ನಟನೆ ಬಗ್ಗೆ ನೆಟಿಜನ್ಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೆ ನಟಿ ಪವಿತ್ರಾ ಲೋಕೇಶ್ ಅವರ ಸಂಭಾವನೆ ವಿಚಾರ ಕೂಡ ಸಖತ್ ಸುದ್ದು ಮಾಡುತ್ತಿದೆ. ‘ಮಳ್ಳಿ ಪೆಳ್ಳಿ’ ಚಿತ್ರದ ಮೂಲಕ ಪವಿತ್ರಾ ಲೋಕೇಶ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ದಿನಕ್ಕೆ 60 ಸಾವಿರ ಸಂಭಾವನೆ ಪಡೆಯುತ್ತಿದ್ದ ಪವಿತ್ರಾ ಲೋಕೇಶ್, ಇದೀಗ ಒಂದು ಲಕ್ಷ ರೂ.ಗೆ ಏರಿಕೆ ಮಾಡಿಕೊಂಡಿದ್ದಾರಂತೆ. ಅಲ್ಲದೇ ಮಳ್ಳಿ ಪೆಳ್ಳಿ ಚಿತ್ರದ ನಟನೆಗಾಗಿ 10 ಕೋಟಿ ರೂ. ಪಡೆದಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ಚಿತ್ರತಂಡವಾಗಲಿ, ನಿರ್ಮಾಪಕರಾಗಲಿ ಯಾರೂ ಸ್ಪಷ್ಟೀಕರಣ ನೀಡಿಲ್ಲ. ಸ್ವತಃ ನರೇಶ್ ಅವರೇ ಚಿತ್ರಕ್ಕೆ 15 ಕೋಟಿ ಖರ್ಚು ಮಾಡಲಾಗಿದೆ ಎಂದಿದ್ದಾರೆ. ಹಾಗಾಗಿ 10 ಕೋಟಿ ರೂ. ಸಂಭಾವನೆ ಸುಳ್ಳು. ಟಾಲಿವುಡ್ನ ಟಾಪ್ ನಟಿಯರಿಗೆಯೇ ಅಷ್ಟು ಸಂಭಾವನೆ ಇಲ್ಲ, ಪವಿತ್ರಾ ಲೋಕೇಶ್ಗೆ ಇಷ್ಟು ದೊಡ್ಡ ಮೊತ್ತ ನೀಡಿರುವುದು ಹುಸಿ ಸುದ್ದಿ ಅನ್ನೋದು ಕೆಲವರ ಮಾತು.
‘ಸಮ್ಮೋಹನಂ’ ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡಿದ್ದ ನರೇಶ್-ಪವಿತ್ರಾ ಆ ನಂತರ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಬಳಿಕ ಆತ್ಮೀಯರಾದರು. ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಚಿತ್ರರಂಗವು ಸೇರಿದಂತೆ ಜಾಲತಾಣಗಳಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ಕೇಳಿ ಬಂದಿದ್ದವು.
ನರೇಶ್ ಅವರ ಮೂರನೇ ಪತ್ನಿ ರಮ್ಯಾ ಕೂಡ ಇವರಿಬ್ಬರ ಸಂಬಂಧದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇತ್ತೀಚೆಗೆ ಮೈಸೂರಿನ ಹೋಟೆಲ್ವೊಂದರಲ್ಲಿ ಇಬ್ಬರೂ ಜೊತೆಯಾಗಿ ತಂಗಿರುವ ಸುದ್ದಿ ತಿಳಿದು ರಮ್ಯಾ ರಘುಪತಿ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ನರೇಶ್ ಮತ್ತು ಪವಿತ್ರಾ ಅವರನ್ನು ಹೋಟೆಲ್ನಿಂದ ಹೊರಗೆ ಕರೆಯುವಂತೆ ಪಟ್ಟು ಹಿಡಿದಿದ್ದರು. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ, ಭದ್ರತೆಯಲ್ಲಿ ನರೇಶ್ ಮತ್ತು ಪವಿತ್ರಾ ಅವರನ್ನು ಹೊರಗೆ ಕರೆತಂದು ಕಾರಲ್ಲಿ ಕಳುಹಿಸಿದ್ದರು.
ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಈ ಜೋಡಿ ಸಾಕಷ್ಟು ವಿಷಯ ಹಂಚಿಕೊಂಡಿತ್ತು. ''ಒಂದೆರಡು ನಿಮಿಷದ ಟೀಸರ್, ಟ್ರೇಲರ್ ನೋಡಿ ಯಾವ ನಿರ್ಧಾರಕ್ಕೂ ಬರಬೇಡಿ. ಸಿನಿಮಾ ನೋಡಿದರೆ ನಾವು ಏನು ಹೇಳಲು ಹೊರಟಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಲು ಹೊರಟಿದ್ದೇವೆ. ಈಗಲೇ ಸಿನಿಮಾ ಕಥೆಯನ್ನು ಹೇಳಲು ಸಾಧ್ಯವಿಲ್ಲ. ನಮ್ಮ ಜೀವನಕ್ಕೂ ಸಿನಿಮಾಗೂ ಏನೂ ಸಂಬಂಧ ಇಲ್ಲ. ಸಿನಿಮಾ ಬೇರೆ, ವೈಯಕ್ತಿಕ ಜೀವನವೇ ಬೇರೆ" ಎಂದು ಪವಿತ್ರಾ ಲೋಕೇಶ್ ಹೇಳಿದ್ದರು.
ನರೇಶ್ ಮಾತನಾಡಿ "ಈ ಹಿಂದೆ ದೇವಾನುದೇವತೆಗಳೇ ಬಹುಪತ್ನಿತ್ವದಲ್ಲಿದ್ದರು. ರಾಜರೂ ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಿದ್ದರು. ಅದೆಲ್ಲವನ್ನೂ ನಾವು ಸ್ವೀಕರಿಸಿ, ಒಪ್ಪಿಕೊಂಡಿದ್ದೇವೆ. ಈಗಲೂ ಸುಪ್ರೀಂಕೋರ್ಟ್ ಲಿವ್ ಇನ್ ರಿಲೇಶನ್‌ಶಿಪ್ ತಪ್ಪಲ್ಲ ಎಂದು ತೀರ್ಪು ನೀಡಿದೆ. ಅಂತಹದ್ದರಲ್ಲಿ ನಮ್ಮಿಬ್ಬರ ತಪ್ಪು ಏನಿದೆ?. ನಾನಂತೂ ಸಿಂಗಲ್ ಅಲ್ಲ. ಪವಿತ್ರಾ ಹಾಗೂ ನಾನು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದೇವೆ" ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು.
ಮಳ್ಳಿ ಪೆಳ್ಳಿ ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿ ನರೇಶ್ ನಿರ್ಮಾಣ ಮಾಡಿದರೆ ಎಂ.ಎಸ್ ರಾಜು, ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಒಂಬತ್ತು ವರ್ಷದ ಮೋದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿವೈನ್ ಸ್ಟಾರ್.. ವಿಡಿಯೋ ನೋಡಿ