ತೆಲುಗು ನಟ ವಿಷ್ಣು ಮಂಚು ನಾಯಕರಾಗಿ ಅಭಿನಯಿಸಿರುವ ಆ್ಯಕ್ಷನ್, ಕಾಮಿಡಿ ಜಾನರ್ನ ಜಿನ್ನಾ ಸಿನಿಮಾ ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಹೌದು, ಇದೇ ಅಕ್ಟೋಬರ್ 21 ರಂದು ವಿಶ್ವಾದಾದ್ಯಂತ ಜಿನ್ನಾ ಸಿನಿಮಾ ರಿಲೀಸ್ ಆಗಲಿದೆ. ಚಿತ್ರ ತಂಡವೀಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.
ಇತ್ತೀಚೆಗೆ ನಟ ವಿಷ್ಣು ಮಂಚು ಸಿನಿಮಾ ಪ್ರಮೋಷನ್ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ನಾನು 2012ರಲ್ಲಿ ಸಿನಿಮಾ ಪ್ರಮೋಷನ್ಗಾಗಿ ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ ಅಂಬರೀಶ್ ಅವರು ತುಂಬಾ ಸಪೋರ್ಟ್ ಮಾಡಿದ್ದರು. ಅವರು ನನ್ನ ತಂದೆ ಇದ್ದ ಹಾಗೆ. ಈಗ ನಮ್ಮ ಚಿತ್ರದ ಪ್ರಮೋಷನ್ಗಾಗಿ ಬೆಂಗಳೂರಿಗೆ ಬಂದಿದ್ದೇನೆ. ನಮ್ಮ 'ಜಿನ್ನಾ' ಸಿನಿಮಾ ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಅಕ್ಟೋಬರ್ 21ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆ ನಾನು ರಾಕ್ ಲೈನ್ ವೆಂಕಟೇಶ್ ಅವರನ್ನು ಕೇಳಿದಾಗ ಅವರು ಮುಕುಂದ ಚಿತ್ರಮಂದಿರದ ಮಾಲೀಕರಾದ ವೆಂಕಟೇಶ್ ಅವರನ್ನು ಪರಿಚಯಿಸಿದರು. ವೆಂಕಟೇಶ್ ಅವರು ನಮ್ಮ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಈ ಕಥೆಯನ್ನು ನನ್ನ ತಂದೆ ಮೋಹನ್ ಬಾಬು ಅವರು ಕೇಳಿ ಒಕೆ ಮಾಡಿ, ನಿರ್ಮಾಣ ಮಾಡಲು ಮುಂದಾದರು. ನನಗೆ ಕಥೆ ಹೇಳುವ ಮೊದಲೇ ನಿರ್ದೇಶಕ ಸೂರ್ಯ ಸನ್ನಿಲಿಯೋನ್ ಅವರ ಡೇಟ್ ತೆಗೆದುಕೊಂಡಿದ್ದರು. ಇದು ನನ್ನ ಫೇವರಿಟ್ ಆ್ಯಕ್ಷನ್, ಕಾಮಿಡಿ ಜಾನರ್ ಚಿತ್ರವಾಗಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಕೂಡ ಒಳಗೊಂಡಿದೆ. ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿಲ್ಲ. ತೆಲುಗು ಭಾಷೆಯಲ್ಲೇ ಬಿಡುಗಡೆ ಮಾಡುತ್ತಿದ್ದೇವೆ ಎಂದು ನಟ ವಿಷ್ಣು ತಿಳಿಸಿದರು.
ಈಗ ದಕ್ಷಿಣ ಭಾರತದ ಸಿನಿಮಾಗಳಿಗೆ ಒಳ್ಳೆಯ ಸಮಯ ಎನ್ನಬಹುದು. ಸಿನಿಮಾ ಚೆನ್ನಾಗಿದ್ದರೆ ಇಡೀ ಭಾರತ ಯಾವ ಭಾಷೆಯಲ್ಲಿ ಆದರೂ ನೋಡುತ್ತದೆ. ಅದಕ್ಕೆ 'ಕಾಂತಾರ' ಸಿನಿಮಾ ಒಳ್ಳೆ ಉದಾಹರಣೆ. ಮುಂಬೈನಲ್ಲಿ 'ಕಾಂತರ' ಕನ್ನಡದಲ್ಲೇ ಶೋಗಳು ಇದ್ದವು. ಸಿನಿಮಾ ನೋಡಿ ಜನ ಒಪ್ಪಿದರು. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ ಇದೆ ಎಂದರು ನಾಯಕ ವಿಷ್ಣು ಮಂಚು.
'ಈಗಾಗಲೇ ಚಿತ್ರದ ಎಲ್ಲಾ ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ನಿಮ್ಮೆಲ್ಲರ ಸಹಕಾರವಿರಲಿ ಎಂದು ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್ ತಿಳಿಸಿದರು. ಕರ್ನಾಟಕದಲ್ಲಿ ತೆಲುಗು ಭಾಷೆಯಲ್ಲಿಯೇ 50 ರಿಂದ 60 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ವಿತರಕ ವೆಂಕಟೇಶ್ ಹೇಳಿದರು. ನಿರ್ಮಾಪಕ ಎನ್. ಎಸ್ ರಾಜಕುಮಾರ್, ಪರಿಜಾತ ಮಧುಸೂದನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾಂತಾರ ಹವಾ: ರಿಷಬ್ ಶೆಟ್ರನ್ನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ನಟ ಕಾರ್ತಿ
ವಿಷ್ಣು ಮಂಚು ಅವರಿಗೆ ನಾಯಕಿಯರಾಗಿ ಸನ್ನಿ ಲಿಯೋನ್ ಹಾಗೂ ಪಾಯಲ್ ರಜಪೂತ್ ಅಭಿನಯಿಸಿದ್ದಾರೆ. "ಜಿನ್ನಾ" ಚಿತ್ರವನ್ನು ಸೂರ್ಯ ನಿರ್ದೇಶನ ಮಾಡಿದ್ದು, ಮೋಹನ್ ಬಾಬು ಅವರು ನಿರ್ಮಾಣ ಮಾಡಿದ್ದಾರೆ