ಬೆಂಗಳೂರು: ಕನ್ನಡ ಚಿತ್ರರಂಗದ ಸ್ಟಾರ್ ನಟ ಸುದೀಪ್ ಮತ್ತು ನಿರ್ಮಾಪಕ ಎನ್ ಎಂ ಕುಮಾರ್ ನಡುವಿನ ಮನಸ್ತಾಪ ದಿನಕ್ಕೊಂದು ರೂಪ ಪಡೆಯುತ್ತಿದೆ. ಈಗಾಗಲೇ ಕುಮಾರ್ ಆರೋಪಕ್ಕೆ ಪ್ರತಿಯಾಗಿ ಸುದೀಪ್ ಕ್ರಿಮಿನಲ್ ಡಿಫಾಮೇಷನ್ (ಮಾನನಷ್ಟ) ಮೊಕದ್ದಮೆ ಹೂಡಿದ್ದಾರೆ. ಸಮಸ್ಯೆಯನ್ನು ಕಾನೂನಿನ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ನಿನ್ನೆಯಷ್ಟೇ ಕುಮಾರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಕುಳಿತಿದ್ದರು. ರಾಜಿ ಸಂಧಾನದ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಿದ್ಧ ಎಂದಿದ್ದರು. ಇದೀಗ ಈ ವಿಚಾರವಾಗಿ ನಟ, ನಿರ್ಮಾಪಕ ಮತ್ತು ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ ಮೌನ ಮುರಿದಿದ್ದಾರೆ.
"ಪರಿಸ್ಥಿತಿ ಸರಿ ಇಲ್ಲದೇ ಇದ್ದಾಗ, ಮನಸ್ಥಿತಿ ಸರಿ ಇರಲ್ಲ. ಅವೆರಡನ್ನೂ ಬ್ಯಾಲೆನ್ಸ್ ಮಾಡಬೇಕು. ಈ ವಿಚಾರ ಸುದೀಪ್ಗೆ ಬಹಳ ಬೇಸರ ತಂದಿದೆ, ಎಷ್ಟು ಬೇಸರ ಆಗಿದೆ ಅನ್ನೋದು ನನಗೆ ಗೊತ್ತಿಲ್ಲ. ಎಲ್ಲರೂ ಪರಿಚಯದವರು, ನಮ್ಮ ಮನೆಯವರೇ. ಒಂದು ಸೆಕೆಂಡ್ ಎಲ್ಲರೂ ಕೂಲ್ ಆಗ್ಬೇಕು. ನಾನು ಎಲ್ಲವನ್ನೂ ಪರಿಶೀಲಿಸುತ್ತೇನೆ. ದಾಖಲೆಗಳನ್ನು ಮೊದಲು ನೋಡುತ್ತೇನೆ. ಆಮೇಲೆ ಸುದೀಪ್ ಜೊತೆ ಈ ವಿಷಯವಾಗಿ ಮಾತನಾಡಬೇಕೋ, ಬೇಡವೋ ಎಂಬುದನ್ನು ತೀರ್ಮಾನ ಮಾಡ್ತೀನೆ. ಈಗ ನಾನು ಈ ಬಗ್ಗೆ ಮಾತನಾಡಿದ್ರೆ ಅದು ತಪ್ಪಾಗುತ್ತೆ" ಎಂದರು.
ಇದನ್ನೂ ಓದಿ: ಕುಮಾರ್ - ಕಿಚ್ಚ ವಾರ್: ನಿರ್ಮಾಪಕರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ನಟ ಸುದೀಪ್
"ಇನ್ನು ನನ್ನ ಮಗನ ಮೇಲೆ ಆರೋಪ ಮಾಡಿದ್ದಾರೆ. ಹೀಗಾಗಿ ನನ್ನ ಮಗನನ್ನು ಬಿಟ್ಟು ಕೊಡುವುದಿಲ್ಲ. ನಿರ್ಮಾಪಕ ಕುಮಾರ್ ಬರಲಿ, ನಾನು ಮಾತನಾಡುತ್ತೇನೆ. ಸುದೀಪ್ ಮತ್ತು ಕುಮಾರ್ ಮೊದಲಿನಿಂದಲೂ ಬಹಳ ಆತ್ಮೀಯರು. ಇದು ಗಂಡ-ಹೆಂಡತಿ ಜಗಳ ಇದ್ದಂತೆ. ಈ ಸಮಸ್ಯೆಯನ್ನು ನಾವೇ ಕುಳಿತು ಬಗೆಹರಿಸಿಕೊಳ್ಳಬೇಕು. ಸುದೀಪ್ ಕೋರ್ಟ್ಗೆ ಹೋಗಿದ್ದಾರೆ, ಅವರ ಮನಸ್ಸಿಗೆ ತುಂಬಾ ನೋವಾಗಿದೆ ಅನ್ನೋದು ಇದರಿಂದಲೇ ಗೊತ್ತಾಗುತ್ತದೆ. ಮೊದಲು ವಾತಾವರಣ ತಿಳಿ ಮಾಡೋಣ" ಎಂದು ಹೇಳಿದರು.
"ಸುದೀಪ್ ಮತ್ತು ಕುಮಾರ್ 20 ವರ್ಷದಿಂದ ಪರಿಚಯ ಇಟ್ಟುಕೊಂಡವರು. ಅವರಿಬ್ಬರದ್ದು ಒಳ್ಳೆಯ ಗೆಳೆತನ. ಸಡನ್ ಆಗಿ ಬೆರಳು ತೋರಿಸಿದ್ದರಿಂದ ಸುದೀಪ್ ಅವರಿಗೆ ಬೇಸರ ಆಗಿದೆ. ಎರಡು ಕಡೆ ಸಹನೆ ಮೀರಿದೆ. ಹೀಗಾಗಿ ಈ ರೀತಿ ಆಗ್ತಾ ಇದೆ. ಧರಣಿ ಕುಳಿತವರು ಎದ್ದೇಳಬೇಕು. ಆಮೇಲೆ ಏನು ಮಾಡಬೇಕು ಅಂತ ನಾವು ನಿರ್ಧಾರ ಮಾಡ್ತೀವಿ. ಕುಮಾರ್ ಅವರದ್ದು ತಪ್ಪಿದ್ದರೆ ಕರೆಸಿ ಮಾತಾಡ್ತೀನಿ. ಸುದೀಪ್ ಅವರದ್ದು ತಪ್ಪಾಗಿದ್ದರೆ ನಾನೇ ಹೋಗಿ ಸುದೀಪ್ ಬಳಿ ಮಾತಾಡ್ತೀನಿ. ಈ ಆರೋಪದ ದಾಖಲೆಗಳನ್ನು ಪರಿಶೀಲಿಸಿ, ನಂತರ ಅವರಿಬ್ಬರಲ್ಲೂ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಪಡ್ತೀವಿ" ಎಂದು ತಿಳಿಸಿದರು.
ಇದನ್ನೂ ಓದಿ: ಕಿಚ್ಚ- ಕುಮಾರ್ ವಾರ್: ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವೆಂದ ನಿರ್ಮಾಪಕ