ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ತಮ್ಮ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ. ಅಸ್ಸೋಂನ ಫ್ಯಾಷನ್ ಉದ್ಯಮಿ ರೂಪಾಲಿ ಬರೋವಾ ಅವರನ್ನು ವಿವಾಹವಾಗಿದ್ದಾರೆ. ಗುರುವಾರ ಕೆಲವೇ ಕೆಲವು ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಮದುವೆಯಾದ ಈ ಜೋಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೂಪಾಲಿ ಅವರು ಕೋಲ್ಕತ್ತಾದಲ್ಲಿ ಹಲವು ಫ್ಯಾಷನ್ ಮಳಿಗೆಗಳನ್ನು ಹೊಂದಿದ್ದು ಆಶಿಶ್ ವಿದ್ಯಾರ್ಥಿ ಇತ್ತೀಚೆಗೆ ಅವರೊಂದಿಗೆ ಸ್ನೇಹ ಬೆಳೆಸಿದ್ದರು. ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಆ ಬಳಿಕ ಮದುವೆ ಬಗ್ಗೆ ಪರಸ್ಪರ ಮಾತನಾಡಿಕೊಂಡಿದ್ದರು. ಅಂದುಕೊಂಡಂತೆ ಈ ಜೋಡಿ ಇಂದು ಸರಳವಾಗಿ ಹಸೆಮಣೆ ಏರಿದೆ. ಆಶಿಶ್ ವಿದ್ಯಾರ್ಥಿ ಅವರು ಇದಕ್ಕೂ ಮುನ್ನ ಬಂಗಾಳಿ ನಟಿ ರಾಜೋಶಿ ಅವರನ್ನು ಮದುವೆಯಾಗಿದ್ದರು. ಕಾರಣಾಂತರಗಳಿಂದ ಮದುವೆ ಮುರಿದು ಬಿದ್ದಿತ್ತು.
ಆಶಿಶ್ ವಿದ್ಯಾರ್ಥಿ ಬಾಲ್ಯ ಜೀವನ: ದೆಹಲಿಯಲ್ಲಿ 1962ರಲ್ಲಿ ಜನಿಸಿದ ಆಶಿಶ್ ವಿದ್ಯಾರ್ಥಿ, ತಂದೆಯ ಪ್ರಭಾವದಿಂದ ಚಿತ್ರರಂಗಕ್ಕೆ ಬಂದರು. ಅವರ ತಂದೆ ಮಲಯಾಳಿ ಮತ್ತು ತಾಯಿ ಬಂಗಾಳಿ ಮೂಲದವರು. ಆಶಿಶ್ ತಂದೆ ಗೋವಿಂದ ವಿದ್ಯಾರ್ಥಿ ಪ್ರಸಿದ್ಧ ರಂಗಭೂಮಿ ಕಲಾವಿದರು. ಗೋವಿಂದ ವಿದ್ಯಾರ್ಥಿ ಸಂಗೀತ ನಾಟಕ ಅಕಾಡೆಮಿಗಾಗಿ ಭಾರತದ ಕಣ್ಮರೆಯಾಗುತ್ತಿರುವ ಪ್ರದರ್ಶನ ಕಲೆಗಳನ್ನು ಪಟ್ಟಿಮಾಡುವ ಮತ್ತು ಆರ್ಕೈವ್ ಮಾಡುವಲ್ಲಿ ಪರಿಣತರು. ತಂದೆಯ ಮೂಲಕ ಆಶಿಶ್ ಚಿತ್ರರಂಗಕ್ಕೆ ಬಂದು ನಟನಾಗಿ ಗುರುತಿಸಿಕೊಂಡಿದ್ದಾರೆ. 1991 ರಿಂದ ಇಲ್ಲಿಯರೆಗೆ ನೂರಾರು ಚಲನಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಹೆಚ್ಚಾಗಿ ಖಳನಟರಾಗಿ ಕಾಣಿಸಿಕೊಂಡಿದ್ದಾರೆ.
'ಕಾಲ್ ಸಂಧ್ಯಾ' ಇವರ ಮೊದಲ ಬಾಲಿವುಡ್ ಚಿತ್ರವಾಗಿದೆ. ಕನ್ನಡ ಸೇರಿದಂತೆ ಸುಮಾರು 11 ಭಾಷೆಗಳಲ್ಲಿ ಖಳನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಪೋಷಕ ನಟರಾಗಿ ಆಶಿಶ್ ವಿದ್ಯಾರ್ಥಿ ಬಣ್ಣ ಹಚ್ಚಿದ್ದಾರೆ. ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಕೂಡ ಲಭಿಸಿವೆ. ಕನ್ನಡದಲ್ಲಿ ದುರ್ಗಿ, ಕೋಟಿಗೊಬ್ಬ, ಎಕೆ-47, ವಂದೇ ಮಾತರಂ, ಸೈನಿಕ, ನಂದಿ, ಆಕಾಶ್, ನಮ್ಮಣ್ಣ, ತಂದೆಗೆ ತಕ್ಕ ಮಗ, ಸುಂಟರಗಾಳಿ ಸೇರಿದಂತೆ ಹಲವು ಸಿನಿಮಾಗಲ್ಲಿ ಅವರು ನಟಿಸಿದ್ದಾರೆ. ತೆಲುಗಿನಲ್ಲಿ ‘ಪಾಪೇ ನಾ ಪ್ರಾಣಂ’ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು.
ಇದನ್ನೂ ಓದಿ: ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದ ಯುವತಿ.. UPSC ಪರೀಕ್ಷೆಯಲ್ಲಿ 760ನೇ ರ‍್ಯಾಂಕ್ ಪಡೆದ ಛಲಗಾತಿ!
ಅವರು ಇತ್ತೀಚೆಗೆ ‘ರೈಟರ್ ಪದ್ಮಭೂಷಣ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ‘ರಾಣಾ ನಾಯ್ಡು’ ವೆಬ್ ಸಿರೀಸ್ನಲ್ಲಿಯೂ ವಿಲನ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಆಶಿಶ್ ವಿದ್ಯಾರ್ಥಿ ಅವರು 20 ವರ್ಷಗಳ ಹಿಂದೆ ಬಂಗಾಳಿ ನಟಿ ರಾಜೋಶಿ ಅವರನ್ನು ವಿವಾಹವಾಗಿದ್ದರು. ಅವರು ಪ್ರಸಿದ್ಧ ರಂಗಭೂಮಿ ಕಲಾವಿದೆಯಾಗಿದ್ದಲ್ಲದೇ ಗಾಯಕರೂ ಆಗಿದ್ದಾರೆ. ಹಾಗೆಯೇ ಅವರಿಗೆ ಒಬ್ಬ ಮಗನೂ ಇದ್ದಾನೆ. ಆದರೆ, ಕೆಲವು ವರ್ಷಗಳ ಹಿಂದೆ, ಭಿನ್ನಾಭಿಪ್ರಾಯದಿಂದ ದಂಪತಿ ಬೇರ್ಪಟ್ಟರು. ಅಂದಿನಿಂದ ಒಂಟಿಯಾಗಿದ್ದ ಅವರು ಈಗ ಮತ್ತೆ ಮದುವೆಯಾಗಿದ್ದಾರೆ. ಸದ್ಯ ಆಶಿಶ್ ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾರೆ. ಅವರು ದೇಶಾದ್ಯಂತ ಸಂಚರಿಸುತ್ತಿದ್ದು ಆಗಾಗ ಉತ್ತಮ ವ್ಲಾಗ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.