ದಾವಣಗೆರೆ: ನಾನು ಮೊದಲೇ ಹೇಳಿದಂತೆ ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದೇನೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ರಾಷ್ಟ್ರ ಹಾಗೂ ರಾಜ್ಯದ ನಾಯಕರ ಸೂಚನೆ ಮೇರೆಗೆ ಎನೇ ಕೊಟ್ಟರು ನಿಭಾಯಿಸುತ್ತೇನೆ ಎಂದು ಹೇಳುವ ಮೂಲಕ ಜಿ.ಎಂ. ಸಿದ್ದೇಶ್ವರ್ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ನಾಲ್ಕನೇ ಬಾರಿ ಗೆದ್ದು ಇತಿಹಾಸ ನಿರ್ಮಿಸಿದ ಜಿ.ಎಂ.ಸಿದ್ದೇಶ್ವರ್, ಈಟಿವಿ ಭಾರತ್ ಜೊತೆ ಮಾತನಾಡಿ, ನಾನು ಮೊದಲೇ ಹೇಳಿದ್ದೆ. ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಏನೇ ಕೆಲಸ ಕೊಟ್ಟರು ನಿಭಾಯಿಸುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮನದಾಸೆಯನ್ನು ಹೊರಹಾಕಿದ್ದಾರೆ.
ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿದೆ ಮತ್ತು ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಹಣ ತಂದು ದಾವಣಗೆರೆ ಅಭಿವೃದ್ಧಿಪಡಿಸಿದೆ. ಈ ಹಿನ್ನೆಲೆ ಜನ ನನ್ನ ಕೈ ಹಿಡಿದಿದ್ದಾರೆ. ಮುಂದಿನ ಐದು ವರ್ಷದಲ್ಲಿ ಜನಪರ ಆಡಳಿತ ನೀಡುತ್ತೇನೆ. ಶಾಮನೂರು ಕುಟುಂಬವನ್ನೇ ಮೂರು ಬಾರಿ ಸೋಲಿಸಿದ್ದೆ. ಈ ಅಭ್ಯರ್ಥಿಯ ಪ್ರಶ್ನೇಯೇ ಬರಲಿಲ್ಲ ಎಂದರು.
ಇದು ಕೊನೆ ಚುನಾವಣೆ
ಈ ಹಿಂದೆ ನಾನು ಘೋಷಣೆ ಮಾಡಿದಂತೆ ಇದು ನನ್ನ ಕೊನೆ ಚುನಾವಣೆ. ಐದು ವರ್ಷ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವುದು, ಶೈಕ್ಷಣಿಕ ಹಾಗೂ ಆರೋಗ್ಯ ಸೇರಿದಂತೆ ವಿವಿಧ ಜನಪರ ಕೆಲಸ ಮಾಡುತ್ತೇನೆ. ಬಳಿಕ ನಿವೃತ್ತಿಯಾಗಿ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ದೇಶದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ಮುಂದೆ ರಾಜ್ಯದ ಮೈತ್ರಿ ಸರ್ಕಾರ ಪತನಗೊಂಡು ಮತ್ತೆ ಬಿಜೆಪಿ ಸರ್ಕಾರ ಬಂದು ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.