ಬೆಂಗಳೂರು: 75 ವರ್ಷದ ಮಿತಿಯಂತೆ ಮೋದಿ, ಅಮಿತ್ ಶಾ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ. ಸ್ಥಾನಮಾನ ಇರಲಿ, ಬಿಡಲಿ ನಾನು ಪಕ್ಷದ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಅವರು ನಮಗೆ ಮಾರ್ಗದರ್ಶನ ಮಾಡಲಿದ್ದಾರೆ. ನಾಳೆ ಯಡಿಯೂರಪ್ಪ ಅವರಿಗೂ ವಯಸ್ಸಾಗಲಿದೆ. ನಾನು ರಾಷ್ಟ್ರೀಯ ಪಕ್ಷದ ಕಾರ್ಯಕರ್ತ. ಮೋದಿ, ಶಾ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರಲಿದ್ದೇನೆ. ಹಿಂದೆ ರಾಜ್ಯದ ಉದ್ದಗಲಕ್ಕೆ ಓಡಾಡಿ ಕೆಲಸ ಮಾಡಿದ್ದೆ. ಆಗ ಯಾವುದೇ ಸ್ಥಾನ ಇರಲಿಲ್ಲ. ಈಗ ಸ್ಥಾನಮಾನ ಇದೆ. ಮುಂದೆಯೂ ಯಾವುದೇ ಸ್ಥಾನಮಾನ ಇರಲಿ, ಬಿಡಲಿ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಲಿದ್ದೇನೆ ಎಂದರು.
ಯಾರೂ ರಾಜಕಾರಣದಲ್ಲಿ ಶಾಶ್ವತ ಅಲ್ಲ. ಅಟಲ್ ಬಿಹಾರಿ ವಾಜಪೇಯಿ ಬಳಿಕ ಯಾರೂ ಉತ್ತರಾಧಿಕಾರಿ ಇರಲಿಲ್ಲ. ಗುಜರಾತ್ ಸಿಎಂ ಆಗಿದ್ದ ಮೋದಿ ಬಂದರು. ಇಲ್ಲಿಯೂ ಅಷ್ಟೇ ನನ್ನ ಬಳಿಕ ಯಾರೂ ಉತ್ತರಾಧಿಕಾರಿ ಆಗಲ್ಲ. ಸಂದರ್ಭಕ್ಕೆ ತಕ್ಕಂತೆ ಯಾರೋ ಒಬ್ಬರು ಬರುತ್ತಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಯಾರಾದರೂ ಬರುತ್ತಾರೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಎಂದರು.
ಅಡ್ವಾಣಿ ನಮ್ಮ ಅಗ್ರಗಣ್ಯ ನಾಯಕ. ಅವರ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲ, ಸಹಮತ ಇದೆ ಎಂದು ಮೋದಿ ಹೇಳಿದ್ದಾರೆ. ನಮ್ಮೆಲ್ಲರಿಗೂ ಮುಂದಿನ ಮಾರ್ಗದರ್ಶನ ಮಾಡುವ ಮಾತನ್ನು ಅಡ್ವಾಣಿ ಹೇಳಿದ್ದಾರೆ. ಅದನ್ನು ಒಪ್ಪುತ್ತೇವೆ ಎಂದು ಅಡ್ವಾಣಿ ಬ್ಲಾಗ್ನಲ್ಲಿ ಬರೆದುಕೊಂಡಿರುವುದನ್ನು ಸಮರ್ಥಿಸಿಕೊಂಡರು.
ಲೋಕಸಭೆ ಚುನಟವಣೆಯಲ್ಲಿ ನಾವು 22 ಸ್ಥಾನ ಗೆದ್ದ ನಂತರ ಮೈತ್ರಿ ಪಕ್ಷದ ನಾಯಕರು ಕಚ್ಚಾಟ ನಡೆಸಿ ಸರ್ಕಾರ ಉಳಿಯಲ್ಲ ಎನ್ನುವ ಸಾಧ್ಯತೆ ಇದೆ. ಭ್ರಷ್ಟಾಚಾರದ ಸರ್ಕಾರದ ಬಗ್ಗೆ ಜನರಲ್ಲೂ ಆಕ್ರೋಶ ಇದೆ. ರಾಜಕೀಯ ಬದಲಾವಣೆಗೂ ಕಾರಣವಾಗಲಿದೆ. ಅಂದು ಯಾವ ಸರ್ಕಾರ ಬರಲಿದೆ ಎನ್ನುವುದು ಅತೃಪ್ತ ಕಾಂಗ್ರೆಸ್ ಶಾಸಕರ ನಿಲುವಿನ ಆಧಾರದಲ್ಲಿ ನಿರ್ಧಾರವಾಗಲಿದೆ ಎಂದು ಬಿಜೆಪಿ ಸರ್ಕಾರ ರಚನೆಯ ವಿಶ್ವಾಸ ವ್ಯಕ್ತಪಡಿಸಿದರು.
ಅಂಬರೀಶ್ಗೆ ಅಪಮಾನ ಮಾಡಿದ್ದಾರೆ. ಅದೇ ಅವರಿಗೆ ತಿರುಗುಬಾಣವಾಗಲಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೂ ಹಿನ್ನಡೆ ಖಚಿತ. ನಮ್ಮ ಅಭ್ಯರ್ಥಿ ಅಲ್ಲಿ ಗೆಲ್ಲುತ್ತಾರೆ. ದೇವೇಗೌಡರು ಕೂಡ ಸೋಲುತ್ತಾರೆ. ಕೋಲಾರದಲ್ಲಿ ಕೂಡ ಇದೇ ಫಲಿತಾಂಶ ಸಾಧ್ಯತೆ ಇದೆ ಎಂದರು.
ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡವ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲ್ಲ. ಎಲ್ಲದಕ್ಕೂ ಶಿಸ್ತುಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೇಳಿಕೆ ನೀಡುವ ಮುನ್ನ ಯೋಚಿಸಬೇಕು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವ ಸ್ಥಿತಿಯಲ್ಲಿ ನಾವಿಲ್ಲ. ನಮ್ಮ ಸರ್ಕಾರ ಬಂದಲ್ಲಿ ಅವರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಈಶ್ವರಪ್ಪ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಹೆಲಿಕಾಪ್ಟರ್ ಸಿಗದಂತೆ ಮೋದಿ ಸರ್ಕಾರ ನೋಡಿಕೊಳ್ಳುತ್ತಿದೆ ಎನ್ನುವ ಸಿಎಂ ಹೇಳಿಕೆ ಆಧಾರ ರಹಿತ. ಕಾಪ್ಟರ್ಗೆ ಬೇಡಿಕೆ ಹೆಚ್ಚಾಗಿದೆ ಅಷ್ಟೇ. ಹೆಲಿಕಾಪ್ಟರ್ ಸಿಕ್ಕಿಲ್ಲ ಎಂದರೆ ಅದಕ್ಕೆ ಮೋದಿ ಕಾರಣವೇ? ನನಗೂ ಸಿಗುತ್ತಿಲ್ಲ. ಸಿಂಗಲ್ ಇಂಜಿನ್ ಹೆಲಿಕಾಪ್ಟರ್ ಪಡೆದು ನಾನೂ ಪರದಾಡುತ್ತಿದ್ದೇನೆ ಎಂದರು.
ಶಿವಮೊಗ್ಗದಲ್ಲಿ ಪುತ್ರನ ಗೆಲುವು ಖಚಿತ. ಬಂಗಾರಪ್ಪ ವಿರುದ್ಧ ಗೆದ್ದಿದ್ದೇವೆ. ಮಧು ವಿರುದ್ಧ ಕೂಡ ರಾಘವೇಂದ್ರ ಗೆದ್ದಿದ್ದಾರೆ. ಈ ಬಾರಿಯೂ 1 ಲಕ್ಷ ಮತಗಳ ಅಂತರದ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.