ಬಳ್ಳಾರಿ: ಲೋಕಸಭಾ ಸಾರ್ವತ್ರಿಕ ಚುನಾವಣಾ ಸಂದರ್ಭ ಯಾರೂ ಕೂಡ ಧರ್ಮ ರಾಜಕಾರಣ ಮಾಡಬಾರದೆಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.
ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಮೈತ್ರಿಕೂಟ ಸರ್ಕಾರದ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಆದರೆ, ವಾಸ್ತವವಾಗಿ ಚುನಾವಣಾ ಸಂದರ್ಭದಲ್ಲಿ ಅವರ ಹೇಳಿಕೆಗಳು ಸೂಕ್ತವಲ್ಲ. ಸಮಯೋಚಿತವಲ್ಲ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಧರ್ಮ ಹಾಗೂ ಜಾತಿ ಬಗ್ಗೆ ಅಪಪ್ರಚಾರ ಮಾಡಬಾರದು. ಕಳೆದ ಬಾರಿ ಧರ್ಮ ರಾಜಕಾರಣಕ್ಕೆ ಕೈ ಹಾಕಿದವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಕಿಚಾಯಿಸಿದರು. ಮಂಡ್ಯದಲ್ಲಿ ಜನರಿಗೆ 150 ಕೋಟಿ ರೂ. ಹಣ ಹಂಚಿಕೆಯಾಗುತ್ತಿದೆ. ಇದರ ಬಗ್ಗೆ ಶಿವರಾಮೇಗೌಡ ಮಗನ ಅಡಿಯೋ ತುಣುಕು ಕೂಡಾ ಬಿಡುಗಡೆಯಾಗಿದೆ. ಸಿಎಂ ಪುತ್ರ ನಿಖಿಲ್ ಹಣದ ದರ್ಪ, ಅಧಿಕಾರದ ವ್ಯಾಮೋಹದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ರೆ ನಮಗೇನೂ ನಷ್ಟವಿಲ್ಲ ಎಂದರು.
ಸಚಿವ ಆಂಜನೇಯ ಬಗ್ಗೆ ಮಾತನಾಡಿ, ಪರಿಶಿಷ್ಟ ಜಾತಿಯ ಪ್ರಬಲ ನಾಯಕ ಆಂಜನೇಯ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಮಾಜಿ ಸಚಿವ ಆಂಜನೇಯ ಅವರು ರಾಹುಲ್ ಗಾಂಧಿಯವರ ಕೈ ಹಿಡಿಯಲು ಹೋದ್ರೆ ಸಿದ್ದು ತಳ್ಳಿದ್ರು. ಪಾಪ ಆಂಜನೇಯ ಅಮಾಯಕರು ಎಂದು ವ್ಯಂಗ್ಯವಾಡಿದ್ರು.
ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಂದಾಗಿಲ್ಲ. ಸಿದ್ದರಾಮಯ್ಯ ಬೇರೆಯವರ ಹೆಗಲ ಮೇಲೆ ಬಂದೂಕಿಟ್ಟು ಹೆದರಿಸುವ ಕೆಲಸ ಮಾಡ್ತಿದ್ದಾರೆ. ಅವರು ಎಷ್ಟೇ ಪ್ರಯತ್ನ ಮಾಡಿದ್ರೂ ಮೈತ್ರಿ ಸರ್ಕಾರ ಉಳಿಯಲ್ಲ ಎಂದರು.
ಚಿತ್ರದುರ್ಗದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ನಲ್ಲಿ ಬಾಕ್ಸ್ ಪತ್ತೆಯಾಗಿರೋದು ಸೆಕ್ಯೂರಿಟಿ ರೀಸನ್ಗೆ ಈ ಬಾಕ್ಸ್ ತಂದಿರ್ತಾರೆ. ಅವರೆಲ್ಲ ಡಮ್ಮಿ ಪ್ರಧಾನಿ ನೋಡಿದ್ದಾರೆ. ಆದರೆ ಗಂಡೆದೆ, ಗಂಡುಗಲಿ ಪ್ರಧಾನಿ ನೋಡಿಲ್ಲ. ಸೋಲಿನ ಹತಾಶೆಯಿಂದ ಕಾಂಗ್ರೆಸ್ನವ್ರು ಹೀಗೆಲ್ಲ ಆರೋಪ ಮಾಡುತ್ತಿದ್ದಾರೆಂದರು.