ಸೇಲಂ: ತಮಿಳುನಾಡಿನಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಹಿತರ ಘಟನೆಗಳಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭದ್ರತಾ ಪಡೆಯನ್ನು ರಾಜ್ಯದಲ್ಲಿ ನಿಯೋಜಿಸಿದೆ. ಹೀಗಿರುವಾಗ ಯೋಧರೊಬ್ಬರು ತಮ್ಮ ಬಂದೂಕಿನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೇಲಂನಲ್ಲಿ ನಡೆದಿದೆ.
ಸೇಲಂ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಒಡಿಶಾದಿಂದ ಬಂದಿರುವ 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಇಲ್ಲಿನ ಅನ್ನಥಾನಪಟ್ಟಿ ಸಮುದಾಯ ಕಲ್ಯಾಣ ಭವನದಲ್ಲಿ ಆಶ್ರಯ ಕಲ್ಪಿಸಿದ್ದಾರೆ.
ಭದ್ರತೆಗಾಗಿ ನಿಯೋಜಿಸಿದ ಒಡಿಶಾದ ಧೇನ್ಕನಲ್ ಜಿಲ್ಲೆಯ ಸಿಐಎಸ್ಎಫ್ ಯೋಧ ಆಶೀಶ್ ಕುಮಾರ್ ಬುಟಿಯಾ (30) ತಮ್ಮ ಬಂದೂಕಿನಿಂದ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲೇ ಇದ್ದ ಭದ್ರತಾ ಪಡೆ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಕುರಿತು ನಿಖರ ಮಾಹಿತಿ ತನಿಖೆ ಬಳಿಕವೇ ಹೊರ ಬರಬೇಕಾಗಿದೆ.
ಈ ಘಟನೆ ಕುರಿತು ಅನ್ನಾಥನಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.