ಹಾಸನ: ಯುವತಿ ಜೊತೆ ಅಸಭ್ಯ ವರ್ತನೆ ಮಾಡಿದ ಹಿನ್ನೆಲೆಯಲ್ಲಿ ಯುವಕನೋರ್ವನ ಬಟ್ಟೆ ಬಿಚ್ಚಿಸಿ ನೈತಿಕ ಪೊಲೀಸ್‌ಗಿರಿ ನಡೆಸಿ ವಿಕೃತಿ ಮೆರೆದ ಘಟನೆಯೊಂದು ಹಾಸನದ ಹೃದಯ ಭಾಗದಲ್ಲಿ ನಡೆದಿದೆ. ಕುಮಾರ್ (27) ಸಾರ್ವಜನಿಕರಿಂದ ವಿವಸ್ತ್ರನಾಗುವುದರ ಜೊತೆಗೆ ಸಖತ್ ಗೂಸಾ ತಿಂದ ಆರೋಪಿ.
ನಿನ್ನೆ ಸಂಜೆ ನಗರದ ಮಹಾರಾಜ ಪಾರ್ಕ್‌ನಲ್ಲಿ ಯುವತಿಯೊಬ್ಬಳ ಕೈ ಹಿಡಿದು ಎಳೆದಾಡಿದ ಆರೋಪ ಹಿನ್ನೆಲೆಯಲ್ಲಿ ಸ್ಥಳೀಯರು ಆತನನ್ನು ಹಿಡಿದು ನಡುರಸ್ತೆಯಲ್ಲಿಯೇ ಥಳಿಸಿದ್ದಾರೆ.
ಏನಿದು ಪ್ರಕರಣ:
ವಿದ್ಯಾರ್ಥಿನಿಯೊಬ್ಬಳು ಕಾಲೇಜು ಮುಗಿದ ಬಳಿಕ ವಿಹಾರಕ್ಕೆಂದು ನಗರದ ಮಹಾರಾಜ ಪಾರ್ಕ್‌ಗೆ ಬಂದಿದ್ದು, ಈ ಸಮಯದಲ್ಲಿ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕ ಯುವಕನೋರ್ವ ಕುಡಿದ ಅಮಲಿನಲ್ಲಿ ಪಾರ್ಕ್‌ನಲ್ಲಿ ವಿಹರಿಸುತ್ತಿದ್ದ ವಿದ್ಯಾರ್ಥಿನಿಯ ಕೈ ಹಿಡಿದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ವೇಳೆ ಸ್ಥಳೀಯರೊಬ್ಬರು ಈತನ ಕೃತ್ಯವನ್ನು ವಿರೋಧಿಸಿದಾಗ ಈಕೆ ನಿನ್ನ ತಂಗಿಯೇ ಅಥವಾ ನಿನ್ನ ಸಂಬಂಧಿಯೇ ? ಎಂದು ಪ್ರಶ್ನಿಸಿದಾಗ ಕುಪಿತಗೊಂಡ ಸ್ಥಳೀಯರೊಬ್ಬರು ಆತನ ಕೆನ್ನೆಗೆ ಎರಡು ಬಾರಿಸಿ ಸುತ್ತಮುತ್ತಲ ಮಂದಿಯನ್ನು ಕರೆದು ಚೆನ್ನಾಗಿ ಥಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕೆಲ ಪುಂಡ ಯುವಕರು ಇದನ್ನೇ ಬಂಡವಾಳ ಮಾಡಿಕೊಂಡು ಪ್ರಚಾರಗಿಟ್ಟಿಸಿಕೊಳ್ಳಲು ಆರೋಪಿ ಯುವಕನನ್ನು ಬಲವಂತವಾಗಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಕರೆ ತಂದು ಆತನ ಬಟ್ಟೆ ಬಿಚ್ಚಿಸಿದಷ್ಟೆಯಲ್ಲದೇ ನೈತಿಕ ಪೊಲೀಸ್‌ಗಿರಿ ಮೂಲಕ ವಿಕೃತಿ ಮೆರೆಯುತ್ತಿದ್ದರೂ, ಸ್ಥಳೀಯರು ಮೂಕ ವಿಸ್ಮಿತರಾಗಿ ನೋಡುತ್ತಿದ್ದರು.
ಹಲ್ಲೆ ಮಾಡಿದವರಿಗೆ ತರಾಟೆ
ಗೂಸಾ ತಿಂದ ಆರೋಪಿ ಕುಮಾರ್ ಕೈಮುಗಿದು ತಪ್ಪಾಯಿತು ಎಂದು ಬೇಡಿಕೊಂಡರೂ ಬಿಡದ ಪುಂಡ ಯುವಕರು ವಿಡಿಯೋ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜವೇ ನಾಚುವಂತೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಬಿಚ್ಚಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಯುವಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ದವೂ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಘಟನೆ ನಡೆದರೂ ಬಳಿಕ ಬಂದ ಪೊಲೀಸರು ಆರೋಪಿಯನ್ನು ಕೊನೆಗೆ ರಕ್ಷಣೆ ಮಾಡಿ ಹಲ್ಲೆ ಮಾಡಿದವರಿಗೆ ಕ್ಲಾಸ್ ತೆಗೆದುಕೊಂಡು ಯುವಕನಿಗೆ ಬಟ್ಟೆ ತೊಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಇಂತಹುದೊಂದು ಕೃತ್ಯ ಇದು ಮೊದಲ ಬಾರಿಗೆ ನಡೆದಿದ್ದು, ಜಿಲ್ಲೆಯಷ್ಟೆಯಲ್ಲದೇ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ನೈತಿಕ ಪೊಲೀಸ್ಗಿರಿಯ ವಿರುದ್ದ ಈಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಹಾಸನ: ಶಾಲೆಯ ಖಾಲಿ ಜಾಗದಲ್ಲಿ ತರಕಾರಿ ಬೆಳೆದು ಮಕ್ಕಳಿಗೆ ನೆರವಾಗುವ ಶಿಕ್ಷಕ