ರಾಮನಗರ: ಅಕ್ರಮ ಸಂಬಂಧದ ಹಿನ್ನೆಲೆ, ಪತಿರಾಯ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಸಾತನೂರು ಹೋಬಳಿ ಕಂಚನಹಳ್ಳಿ
ಗ್ರಾಮದಲ್ಲಿ ನಡೆದಿದೆ.
ಓದಿ: ಅಕ್ರಮವಾಗಿ ರಸಗೊಬ್ಬರ - ಬೀಜ ಮಾರಿದರೆ ಕಾನೂನು ಕ್ರಮ : ಸಚಿವ ಬಿ.ಸಿ. ಪಾಟೀಲ ಎಚ್ಚರಿಕೆ
ಗ್ರಾಮದ ವಾಸಿ ಲಕ್ಷ್ಮಮ್ಮ (35) ಕೊಲೆಯಾಗಿದ್ದು, ಪತಿ ರವಿ ಕೃತ್ಯ ಎಸಗಿದ್ದಾನೆ. ಹತ್ತು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿ ಗೊಲ್ಲರಹಳ್ಳಿ ಗ್ರಾಮದ ರವಿಯೊಂದಿಗೆ ಕಂಚನಹಳ್ಳಿಯ ಲಕ್ಷ್ಮಮ್ಮ ಅವರ ವಿವಾಹ ನಡೆದಿತ್ತು.
ಈ ದಂಪತಿಗೆ ಓರ್ವ ಪುತ್ರನಿದ್ದು, ಜೀವನ ನಿರ್ವಹಣೆಗಾಗಿ ಮದ್ದೂರಿನಲ್ಲಿ ವಾಸವಾಗಿದ್ದರು. ಕಂಚನಹಳ್ಳಿಯ ತನ್ನ ತಾಯಿ ಮನೆಗೆ ಬಂದಿದ್ದ ಲಕ್ಷ್ಮಮ್ಮ ಮಲಗಿದ್ದ ವೇಳೆ, ರವಿ ಪಾನಮತ್ತನಾಗಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ವೃತ್ತ ನಿರೀಕ್ಷಕ ಟಿ.ಟಿ. ಕೃಷ್ಣ ಹಾಗೂ ಸಾತನೂರು ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ರವಿಯನ್ನು ವಿಚಾರಣೆಗೊಳಪಡಿಸಿದಾಗ ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಾತನೂರು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.