ಸಾಹಿಬ್‌ಗಂಜ್ (ಜಾರ್ಖಂಡ್): ಕಳ್ಳರು ಕದ್ದ ಮಾಲನ್ನು ಚಿನ್ನದ ಅಂಗಡಿ ಅಥವಾ ಇತರ ಕಡೆ ಮಾರಾಟ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಳ್ಳರ ಗ್ಯಾಂಗ್ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನ ಮತ್ತು ವಜ್ರ ಖಚಿತ ಐಪೋನ್ ಕದ್ದು ಪೊಲೀಸರಿಗೆ ಸಾಮಾಜಿಕ ಜಾಲತಾಣದ ನೆರವಿನಿಂದ ಸಿಕ್ಕಿಬಿದ್ದಿದ್ದಾರೆ.
ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ ಕಳ್ಳರ ಗ್ಯಾಂಗ್ ಬೇರೆ ಕಡೆ ಕದ್ದಿದ್ದ ವಿಶೇಷವಾಗಿ ಚಿನ್ನ ಮತ್ತು ವಜ್ರದಿಂದ ತಯಾರಿಸಿದ್ದ ಐಫೋನ್ ಅನ್ನು ಮಾರಾಟ ಮಾಡಲು ಸ್ಥಳೀಯರಿಗೆ ತೋರಿಸಿದ್ದಾರೆ. ಇದನ್ನು ನೋಡಿದವರು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ.
ಕೆಲ ಯುವಕರು ಮೊಬೈಲ್ ಹಿಡಿದು ಸೆಲ್ಫಿ ತೆಗೆದುಕೊಂಡು ಆ ಫೋಟೋಗಳನ್ನು ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಭಾರಿ ವೈರಲ್ ಆಗುತ್ತಿದ್ದಂತೆ ವಿಷಯ ಪೊಲೀಸರ ಗಮನಕ್ಕೂ ಬಂದಿದೆ. ಕೂಡಲೇ ಎಚ್ಚೆತ್ತ ಖಾಕಿ ಪಡೆ ಕಳ್ಳರನ್ನು ಬಂಧಿಸಿ ದುಬಾರಿ ಬೆಲೆಯ ಐಫೋನ್ ವಶಕ್ಕೆ ಪಡೆದಿದೆ. ಈ ಮೊಬೈಲ್ ಅನ್ನು 24 ಕ್ಯಾರೆಟ್‌ನ ಚಿನ್ನದಿಂದ ಮಾಡಲಾಗಿದ್ದು, ಇದರಲ್ಲಿ ಡೈಮಂಡ್ ಕೂಡ ಇದೆ.
ವಶಕ್ಕೆ ಪಡೆದಿರುವ ಐಫೋನ್ ಪ್ರೊ ಮ್ಯಾಕ್ಸ್ ಮಾರುಕಟ್ಟೆ ಬೆಲೆ ಸುಮಾರು 4 ಲಕ್ಷ ರೂಪಾಯಿ ಇದೆ. ಇದನ್ನು ಚಿನ್ನ ಹಾಗೂ ವಜ್ರಗಳಿಂದ ತಯಾರಿಸಿರುವುದರಿಂದ ಇದರ ಮೌಲ್ಯ ಹೆಚ್ಚಿದೆ. ಕೆಲ ದಿನಗಳ ಹಿಂದಷ್ಟೇ ಈ ಅಮೂಲ್ಯ ಐಫೋನ್ ನೊಂದಿಗೆ ಸ್ಥಳೀಯ ಕಳ್ಳರ ತಂಡ ತೀನ್ ಪಹಾರ್‌ಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 1993ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಕರಾಚಿಯಲ್ಲಿ ಹೃದಯಾಘಾತದಿಂದ ಸಾವು