ಕಡಬ(ದಕ್ಷಿಣ ಕನ್ನಡ): ಬಲವಂತವಾಗಿ ವಿದ್ಯಾರ್ಥಿನಿ ಜೊತೆ ಆಟೋ ಚಾಲಕ ಲೈಂಗಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗರ್ಭಿಣಿಯಾದ ಘಟನೆ ನಗರದಲ್ಲಿ ನಡೆದಿದೆ. ದೂರಿನ ಮೇರೆಗೆ ಆಟೋ ರಿಕ್ಷಾ ಚಾಲಕನೋರ್ವನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ಚಾಲಕನನ್ನು ಯುವರಾಜ ಎಂದು ಗುರುತಿಸಲಾಗಿದೆ. ಆರೋಪಿಯು ಪ್ರೌಢಶಾಲಾ ದಿನಗಳಲ್ಲಿ ಬಾಲಕಿಯನ್ನು ತನ್ನ ಆಟೋದಲ್ಲಿ ಶಾಲೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದ. ಈ ವೇಳೆ ಅವರಿಬ್ಬರ ನಡುವೆ ಪರಿಚಯ ಬೆಳೆದಿತ್ತು ಎನ್ನಲಾಗಿದೆ. ಬಳಿಕ ಆಕೆ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಲೈಂಗಿಕ ಸಂಪರ್ಕ ಮಾಡಿದ್ದು, 2020ರ ಅಕ್ಟೋಬರ್ ತನಕ ಬಲವಂತದಿಂದ ಈ ಕೃತ್ಯ ನಡೆಸಿದ್ದ ಎನ್ನಲಾಗ್ತಿದೆ.
ಈ ಕುರಿತು ಯುವತಿಯು ಕಡಬ ಪೊಲೀಸರಿಗೆ ದೂರು ನೀಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕ ಯುವರಾಜ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.