ಹಿರಿಯೂರು(ಚಿತ್ರದುರ್ಗ): ಕೌಟುಂಬಿಕ ಕಲಹದಿಂದ ಬೇಸತ್ತು ಇಡೀ ಕುಟುಂಬ ವಾಣಿವಿಲಾಸ ಜಲಾಶಯ ಬಳಿ ಹೋಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಿವಿಸಾಗರ ಬಳಿ ನಡೆದಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ '112' ಸಹಾಯವಾಣಿ ಸಿಬ್ಬಂದಿ ಜಲಾಶಯದ ಬಳಿ ಇದ್ದ ಕುಟುಂಬದವರನ್ನು ರಕ್ಷಿಸಿದ್ದಾರೆ.
ಹಿರಿಯೂರು ತಾಲೂಕಿನ ರಂಗೇನಹಳ್ಳಿಯ ಸಕ್ರಪ್ಪ ಎಂಬವರ ಪತ್ನಿ ರತ್ನಮ್ಮ ಕೌಟುಂಬಿಕ ಕಲಹದಿಂದ ಬೇಸತ್ತು ಪತಿಯಿಂದ ಬೇರೆಯಾಗಿ ಹಿರಿಯೂರಿನ ಸಕ್ಕರೆ ಕಾರ್ಖಾನೆ ವಸತಿ ಗೃಹದಲ್ಲಿ ಎರಡು ತಿಂಗಳಿಂದ ತನ್ನ ತಾಯಿ ಹಾಗೂ ಮೂವರು ಮಕ್ಕಳ ಜೊತೆ ನೆಲೆಸಿದ್ದರು. ಆದರೆ ಸಕ್ರಪ್ಪ ತನ್ನ ಪತ್ನಿ ವಾಸವಾಗಿದ್ದ ಮನೆಯ ಹತ್ತಿರ ಬಂದು ಗಲಾಟೆ ಮಾಡಿದ್ದಾರೆ. ಗಂಡನ ಗಲಾಟೆಯಿಂದ ಬೇಸತ್ತ ರತ್ನಮ್ಮ ಇದೇ ರೀತಿ ತೊಂದರೆ ಕೊಟ್ಟರೆ ಡ್ಯಾಂಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದಾರೆ.
ತಾನೂ ಜೊತೆಗೆ ಬಂದು ಸಾಯುತ್ತೇನೆ ಎಂದು ಸಕ್ರಪ್ಪ ಅವರ ಜೊತೆಯೇ ಹೋಗಿದ್ದರು. ಎಲ್ಲಿ ತನ್ನ ಮಕ್ಕಳನ್ನು ಸಿಟ್ಟಿನ ಭರದಲ್ಲಿ ನೀರಿಗೆ ಎಸೆದು ಬಿಡುತ್ತಾನೋ ಎಂಬ ಭಯದಲ್ಲಿ ರತ್ನಮ್ಮ 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಇಆರ್‌ಎಸ್ಎಸ್ ಕೇಂದ್ರದ ಸಿಬ್ಬಂದಿ ರಮಾಕಾಂತ್ ಅವರು ಹೊಯ್ಸಳ–7 ವಾಹನಕ್ಕೆ ವಿಷಯ ಮುಟ್ಟಿಸಿದರು. ಅಧಿಕಾರಿ ಗಂಗಾಧರ್ ಮತ್ತು ಚಾಲಕ ರವಿ ತಕ್ಷಣ ಕಾರ್ಯಪ್ರವೃತ್ತರಾಗಿ, ಘಟನಾ ಸ್ಥಳಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೋದವರ ಮನವೊಲಿಸಿ ಹಿರಿಯೂರಿನ ಗ್ರಾಮಾಂತರ ಠಾಣೆಗೆ ಕರೆ ತಂದಿದ್ದಾರೆ.
ಠಾಣೆಯಲ್ಲಿ ಪತಿ–ಪತ್ನಿಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ. ಸಕ್ರಪ್ಪ ತನ್ನ ಅಕ್ಕನ ಮಗಳು ರತ್ನಮ್ಮಳನ್ನು ಮದುವೆಯಾಗಿದ್ದು, ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಆರ್‌ಎಸ್ಎಸ್ ಕೇಂದ್ರದ ಸಿಬ್ಬಂದಿ, ಹೊಯ್ಸಳ–7 ವಾಹನದ ಅಧಿಕಾರಿ ಹಾಗೂ ಚಾಲಕರಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ. ರಾಧಿಕಾ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಮ್ಮನ ಸಾವಿನ ಸುದ್ದಿ ಕೇಳಿ ಪುತ್ರನಿಗೆ ಹೃದಯಾಘಾತ: ಬೀದರ್‌ನಲ್ಲಿ ಒಂದೇ ದಿನ ತಾಯಿ-ಮಗ ಸಾವು