ಕೋಲ್ಕತ್ತ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಅಮಾನವೀಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಕಳ್ಳತನ ಶಂಕೆಯಲ್ಲಿ ಯುವಕನೋರ್ವನನ್ನು ಪೊಲೀಸ್ ಸ್ವಯಂಸೇವಕನೋರ್ವ ಸಾರ್ವಜನಿಕವಾಗಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೋಲ್ಕತ್ತಾದಲ್ಲಿ ನಿನ್ನೆ ನಡೆದಿದೆ.
ಯುವಕ ಬಸ್ಸಿನಲ್ಲಿ ನನ್ನ ಬ್ಯಾಗ್ ಕದಿಯಲು ಯತ್ನಿಸಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಆತನನ್ನು ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಆದರೆ, ಸಮೀಪದಲ್ಲೇ ಕರ್ತವ್ಯದಲ್ಲಿದ್ದ ಪೊಲೀಸ್ ಸ್ವಯಂಸೇವಕ ತನ್ಮಯ್ ಬಿಸ್ವಾಸ್ ಎಂಬಾತ ಶಂಕಿತ ಕಳ್ಳನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಎದೆ, ಹೊಟ್ಟೆ ಹಾಗು ಬೆನ್ನಿಗೆ ಬೂಟು ಕಾಲಿನಿಂದ ತುಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ವರ್ತಿಸಿದ್ದಾನೆ.
ತನ್ಮಯ್ ಬಿಸ್ವಾಸ್ ಅಮಾನತು
ಘಟನೆ ಬೆಳಕಿಗೆ ಬಂದ ನಂತರ ನಾಗರಿಕ ಸ್ವಯಂಸೇವಕ ತನ್ಮಯ್ ಬಿಸ್ವಾಸ್‌ನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಈ ಬಗ್ಗೆ ಕ್ಷಮೆಯಾಚಿಸಿರುವ ಕೋಲ್ಕತ್ತಾ ನಗರ ಪೊಲೀಸ್ ಆಯುಕ್ತ ಸೋಮೆನ್ ಮಿತ್ರಾ, ವಿಡಿಯೋ ಆಘಾತಕಾರಿ ಎಂದಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಇನ್ನೊಂದೆಡೆ, ಕೃತ್ಯವನ್ನು ಸಮರ್ಥಿಸಿಕೊಂಡಿರುವ ಬಿಸ್ವಾಸ್, ಯುವಕನನ್ನು ಸ್ಥಳೀಯರು ಥಳಿಸುತ್ತಿದ್ದಾಗ ಆತನನ್ನು ರಕ್ಷಿಸಲು ಯತ್ನಿಸಿದೆ. ಆದರೆ ಅವನು ಓಡಿಹೋಗಲು ಪ್ರಯತ್ನಿಸಿದಾಗ ಕಸ್ಟಡಿಗೆ ತರಲು ತುಂಬಾ ಶ್ರಮಿಸಬೇಕಾಯಿತು ಎಂದು ಹೇಳಿದ್ದಾನೆ.