ಮುಂಬೈ: 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ವಿಶಾಲ್ ಕುಮಾರ್‌ನನ್ನು ಜನವರಿ 10ರ ವರೆಗೆ ಮುಂಬೈ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಸೈಬರ್ ಪೊಲೀಸರು ನಿನ್ನೆ ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದರು. ಇಂದು ಬಾಂದ್ರಾ ಕೋರ್ಟ್‌ಗೆ ಹಾಜರುಪಡಿಸಿ, ನ್ಯಾಯಾಲಯದ ಅನುಮತಿ ಪಡೆದು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದರು.
ಈ ವೇಳೆ, ಆರೋಪಿ ಪರ ವಕೀಲ ಡಿ.ಪ್ರಜಾಪತಿ ಮಾತನಾಡಿ, 'ನನ್ನ ಕಕ್ಷಿದಾರನನ್ನು ಜ.10ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸುಳ್ಳು ಆರೋಪ ಮಾಡಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ' ಎಂದು ದೂರಿದರು.
ಇದೇ ಪ್ರಕರಣ ಸಂಬಂಧ ಉತ್ತರಾಖಂಡ್‌ನಲ್ಲಿಂದು ಬಂಧಿಸಿರುವ ಪ್ರಮುಖ ಆರೋಪಿ ಮಹಿಳೆ ಹಾಗೂ ವಿಶಾಲ್ ಕುಮಾರ್ ಪರಸ್ಪರ ಪರಿಚಿತರೆಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳ ಪೈಕಿ ಮಹಿಳೆ ‘ಬುಲ್ಲಿ ಬಾಯಿ’ ಆ್ಯಪ್‌ಗೆ ಸಂಬಂಧಿಸಿದ ಮೂರು ಖಾತೆಗಳನ್ನು ನಿರ್ವಹಿಸುತ್ತಿದ್ದರೆ, ವಿಶಾಲ್‌ಕುಮಾರ್ ‘ಖಾಲ್ಸಾ ಸುಪ್ರೀಮಾಸಿಸ್ಟ್’ ಎಂಬ ಹೆಸರಿನಲ್ಲಿ ಖಾತೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳುತ್ತಾರೆ. ಡಿಸೆಂಬರ್ 31ರಂದು ಕುಮಾರ್ ತನ್ನ ಖಾತೆಯ ಹೆಸರನ್ನು ಸಿಖ್ ಹೆಸರುಗಳನ್ನು ಹೋಲುವಂತೆ ಬದಲಾಯಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: 'ಬುಲ್ಲಿ ಬಾಯಿ' ಆ್ಯಪ್ ಪ್ರಕರಣ; ಮುಂಬೈ ಸೈಬರ್ ಪೊಲೀಸರಿಂದ ಪ್ರಮುಖ ಆರೋಪಿ ಮಹಿಳೆ ಬಂಧನ