ಪಾಲ್ಘರ್ (ಮಹಾರಾಷ್ಟ್ರ): ಸರಿಯಾಗಿ ಎರಡು ವರ್ಷಗಳ ಹಿಂದೆ 23, ನವೆಂಬರ್ 2020 ರಂದು ಶ್ರದ್ಧಾ ವಾಲ್ಕರ್, ಪಾಲ್ಘರ್ನ ಟುಲಿಂಜ್ ಪೊಲೀಸ್ ಸ್ಟೇಷನ್ಗೆ ಲಿಖಿತ ದೂರೊಂದನ್ನು ನೀಡಿದ್ದರು. ತನ್ನ ಲಿವ್ ಇನ್ ಪಾರ್ಟನರ್ ಅಫ್ತಾಬ್ ಅಮೀನ್ ಪೂನಾವಾಲಾ ತನಗೆ ಹೇಗೆ ಹಿಂಸಿಸುತ್ತಿದ್ದಾನೆ ಮತ್ತು ತನ್ನನ್ನು ಪೀಸ್ ಪೀಸ್ ಆಗಿ ಕತ್ತರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ ಎಂಬುದನ್ನು ತಿಳಿಸಿದ್ದರು.
ಆ ಪತ್ರ ಈಗ ತಾನೇ ಬಹಿರಂಗವಾಗಿದ್ದು, ಈ ದೂರಿಗೆ ಪೊಲೀಸರ ಸ್ವೀಕೃತಿ ಮುದ್ರೆ ಕೂಡ ಇದೆ. ಪೊಲೀಸರು ಈ ದೂರಿನ ಕುರಿತು ಆಗಲೇ ತನಿಖೆ ನಡೆಸಿದ್ದರು. ಆದರೆ ನಂತರ ಶ್ರದ್ಧಾ ತನ್ನ ದೂರನ್ನು ಹಿಂಪಡೆಯುವುದಾಗಿ ಮತ್ತೊಂದು ಪತ್ರ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಕೈಬರಹದಲ್ಲಿ ಬರೆದ ಪತ್ರದಲ್ಲಿ ಶ್ರದ್ಧಾ, ಅಫ್ತಾಬ್ ತನ್ನನ್ನು ಹೊಡೆಯುತ್ತಿದ್ದುದು, ಬ್ಲ್ಯಾಕ್ಮೇಲ್ ಮಾಡಿದ್ದು ಮತ್ತು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದಾರೆ.
ಇದಾಗಿ ಎರಡು ವರ್ಷಗಳ ನಂತರ ಅವಳು ಯಾವುದಕ್ಕೆ ಜಾಸ್ತಿ ಹೆದರಿದ್ದರೋ ಅದೇ ಘಟಿಸಿದೆ. ಶ್ರದ್ಧಾಳನ್ನು ಬರ್ಬರವಾಗಿ ಕೊಲೆಗೈದ ಅಫ್ತಾಬ್ ಆಕೆಯ ಶವವನ್ನು ಕತ್ತರಿಸಿ ಮೆಹ್ರೌಲಿಯ ಅರಣ್ಯದಲ್ಲಿ ದಿನಕ್ಕೊಂದರಂತೆ ತುಂಡು ಬಿಸಾಕಿ ಕ್ರೌರ್ಯ ಮೆರೆದಿದ್ದಾನೆ. ಈ ಪ್ರಕರಣ ಈಗ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.
25 ವರ್ಷದ ಶ್ರದ್ಧಾ, ವಿಜಯ್ ವಿಹಾರ್ ಕಾಂಪ್ಲೆಕ್ಸ್‌ನಲ್ಲಿ ತಾನು ಮತ್ತು 26 ವರ್ಷದ ಅಫ್ತಾಬ್ ಹೇಗೆ ಒಟ್ಟಿಗೆ ವಾಸಿಸುತ್ತಿದ್ದುದನ್ನು ಮತ್ತು ಆರು ತಿಂಗಳಿನಿಂದ ನಿಂದಿಸಿ ಥಳಿಸುತ್ತಿದ್ದ ವಿಷಯವನ್ನು ಹೇಳಿದ್ದಾರೆ. ಇಂದು ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ್ದು, ನನ್ನನ್ನು ಕೊಂದು ತುಂಡು ತುಂಡು ಮಾಡಿ ಬಿಸಾಡುತ್ತೇನೆ ಎಂದು ಹೆದರಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ಶ್ರದ್ಧಾ ಹೇಳಿದ್ದಾರೆ. ಆರು ತಿಂಗಳಿನಿಂದ ನನ್ನನ್ನು ಥಳಿಸುತ್ತಿದ್ದಾನೆ. ಕೊಲೆ ಮಾಡುತ್ತಾನೆಂಬ ಹೆದರಿಕೆಯಿಂದ ಪೊಲೀಸರ ಬಳಿ ಹೋಗುವ ಧೈರ್ಯ ನನಗಿರಲಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಅಫ್ತಾಬ್ ನನ್ನನ್ನು ಹೊಡೆಯುವುದು, ಹಿಂಸಿಸುವುದು ಆತನ ಪಾಲಕರಿಗೆ ಗೊತ್ತಿತ್ತು. ನಾವು ಲಿವ್ ಇನ್ ನಲ್ಲಿ ಇರುವುದು ಅವರಿಗೆ ಗೊತ್ತಿತ್ತು ಮತ್ತು ವಾರಾಂತ್ಯದಲ್ಲಿ ಅವರು ಬಂದು ಭೇಟಿ ಮಾಡುತ್ತಿದ್ದರು. ಆತನ ಕುಟುಂಬದವರ ಒಪ್ಪಿಗೆ ಇದ್ದು ನಾವು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದೇವೆಂಬ ಕಾರಣದಿಂದ ನಾನು ಆತನ ಜೊತೆಗಿದ್ದೇನೆ ಎಂದು ಪತ್ರದಲ್ಲಿ ಶ್ರದ್ಧಾ ಹೇಳಿಕೊಂಡಿದ್ದಾರೆ.
ಇನ್ನು ಮುಂದೆ ನಾನು ಆತನೊಂದಿಗೆ ಇರಲು ಬಯಸುತ್ತಿಲ್ಲ. ನನಗಾಗುವ ಯಾವುದೇ ರೀತಿಯ ದೈಹಿಕ ಹಿಂಸೆಯನ್ನು ಆತನಿಂದ ಆಗಿದ್ದು ಎಂದು ತಿಳಿಯಬೇಕು ಮತ್ತು ಆತ ನನ್ನನ್ನು ಬ್ಲ್ಯಾಕ್ಮೇಲ್ ಮಾಡಿ ಕೊಲ್ಲಲು ಯತ್ನಿಸುತ್ತಿದ್ದಾನೆಂದು ಪರಿಗಣಿಸಬೇಕೆಂದು ಶ್ರದ್ಧಾ ಹೇಳಿದ್ದರು.
ಆಗಿನ ಪೊಲೀಸ್ ತನಿಖಾಧಿಕಾರಿಯು ಶ್ರದ್ಧಾ ಮತ್ತು ಅಫ್ತಾಬ್ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಹೋಗಿ ವಿಚಾರಣೆ ನಡೆಸಿದ್ದರು. ಆದರೆ ದೂರನ್ನು ಮುಂದುವರಿಸಲು ಬಯಸುತ್ತಿಲ್ಲ ಎಂದು ಆಗ ಶ್ರದ್ಧಾ ಹೇಳಿದ್ದಳು ಎಂದು ವರದಿ ತಿಳಿಸಿವೆ.
ಆಕೆ ತನ್ನ ಹಿಂದಿನ ದೂರನ್ನು ಹಿಂದೆಗೆದುಕೊಳ್ಳುವ ಪತ್ರವನ್ನು ನೀಡಿದ್ದರಿಂದ, ಪ್ರಕರಣವನ್ನು ಮುಂದುವರಿಸುವಂತೆ ಒತ್ತಾಯಿಸಲು ಅಥವಾ ಬಲವಂತವಾಗಿ ಆಕೆಯ ಮನೆಗೆ ಪ್ರವೇಶಿಸಲು ಸಾಧ್ಯವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.