ಈರೋಡ್ (ತಮಿಳುನಾಡು): ಆರೋಗ್ಯ ಕಾರ್ಯಕರ್ತನೆಂದು ಹೇಳಲಾದ ವ್ಯಕ್ತಿ ನೀಡಿದ ಮಾತ್ರೆಗಳನ್ನು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಪತಿ ಹಾಗೂ ಮತ್ತಿಬ್ಬರು ಅಸ್ವಸ್ಥರಾಗಿರುವ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದಿದೆ.
ಈರೋಡ್ನ ಕರುಗೌಂದನ್ ವಲಸು ಎಂಬ ಗ್ರಾಮದಲ್ಲಿನ ರೈತ ಕರುಪ್ಪಣ್ಣನ್ ಅವರ ಮನೆಗೆ ಶನಿವಾರ ಬೆಳಗ್ಗೆ ವ್ಯಕ್ತಿಯೊಬ್ಬರು ಭೇಟಿ ನೀಡಿದ್ದರು. ಕೋವಿಡ್ ಲಕ್ಷಣಗಳಿಂದ ಬಳಲುತ್ತಿರುವ ಜನರನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಯಿಂದ ಬಂದಿರುವುದಾಗಿ ಈ ವ್ಯಕ್ತಿ ಹೇಳಿಕೊಂಡಿದ್ದಾನೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಜ್ವರ ಅಥವಾ ಕೆಮ್ಮು ಇದೆಯೇ ಎಂದು ಕೇಳಿದ್ದು, ಕರುಪ್ಪಣ್ಣನ್ ಅವರು ಇಲ್ಲ ಎಂದು ಹೇಳಿದ್ದಾರೆ. ಆದರೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಈ ಇದನ್ನು ಸೇವಿಸಿ ಎಂದು ಕೆಲ ಮಾತ್ರೆಗಳನ್ನು ನೀಡಿ ಆತ ಹೊರಟು ಹೋಗಿದ್ದಾನೆ.
ಇದನ್ನೂ ಓದಿ: ಫೇಸ್ಬುಕ್ನಲ್ಲಿ ಲವ್ವಾಯ್ತು, 7 ತಿಂಗಳ ಹಿಂದೆ ಮದ್ವೆನೂ ಆದರು.. ಈಗ ಯುವತಿ ನೇಣಿಗೆ ಕೊರಳೊಡ್ಡಿದಳಾ!?
ಈ ಮಾತ್ರೆಗಳನ್ನು ಸೇವಿಸಿದ ಸ್ವಲ್ಪ ಹೊತ್ತಿನಲ್ಲೇ ಕರುಪ್ಪಣ್ಣನ್ ಅವರ ಪತ್ನಿ ಸಾವನ್ನಪ್ಪಿದ್ದಾರೆ. ಇತರ ಮೂವರು ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಕೊಯಮತ್ತೂರಿನ ಆಸ್ಪತ್ರೆಗೆ ಮೂವರನ್ನು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಂಕಿತ ಆರೋಗ್ಯ ಕಾರ್ಯಕರ್ತನನ್ನು ಪತ್ತೆ ಮಾಡಲು ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ.