ತುಮಕೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಧೈರ್ಯ ತುಂಬಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲು ತುಮಕೂರು ನಗರದಲ್ಲಿ ನಿನ್ನೆ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ಪಥ ಸಂಚಲನದಲ್ಲಿ ಅಧಿಕಾರಿಗಳು, ಕೆ.ಎಸ್.ಆರ್.ಪಿ ತುಕಡಿಗಳ ಸಿಬ್ಬಂದಿ ಭಾಗವಹಿಸಿದ್ದರು. ಗುಬ್ಬಿ ಗೇಟ್ನಿಂದ ಪ್ರಾರಂಭವಾದ ಪಥಸಂಚಲನವು ಸಂತೆ ಪೇಟೆ ರಸ್ತೆ, ಬಿ.ಜಿ ಪಾಳ್ಯ ಸರ್ಕಲ್, ಎಸ್.ಎಸ್ ಟೆಂಪಲ್ ರೋಡ್, ಚಾಂದಿನಿ ರಸ್ತೆ, ವೀರಸಾಗರ, ದಾನಂ ಪ್ಯಾಲೇಸ್, ಸದಾಶಿವನಗರ, ಬನಶಂಕರಿ ಮುಖ್ಯ ರಸ್ತೆ, ಶಾಂತಿನಗರ, ವಿಶ್ವಣ್ಣ ಲೇಔಟ್, ಇಸ್ಮಾಯಿಲ್ ನಗರ, ಮರಳೂರು ದಿಣ್ಣೆ ರೋಡ್ಗಳಲ್ಲಿ ಸಾಗಿತು.
ಈಗಾಗಲೇ ಹಿಜಾಬ್ ಮತ್ತು ಕೇಸರಿ ಶಾಲು ಪ್ರಕರಣ ಕುರಿತು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ನ್ಯಾಯಾಲಯ ನೀಡುವ ಆದೇಶ, ಸೂಚನೆಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಭಟನೆ, ಧರಣಿ ಮುಂತಾದವುಗಳನ್ನು ಮಾಡಬಾರದು, ಸುಳ್ಳು ಸಂದೇಶ ಮತ್ತು ವದಂತಿಗಳಿಗೆ ಕಿವಿಗೊಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.